ADVERTISEMENT

ಭಟ್ಕಳದ ಕೋವಿಡ್-19 ಪೀಡಿತರಿಗೆ ಕಾರವಾರದಲ್ಲಿ ಚಿಕಿತ್ಸೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಮೇ 2020, 7:57 IST
Last Updated 9 ಮೇ 2020, 7:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಭಟ್ಕಳದ ಕೋವಿಡ್-19 ಪೀಡಿತರಿಗೆ ಅಲ್ಲೇ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೊರೊನಾ ವಾರ್ಡ್‌ಗೆ ಕರೆ ತರಬಾರದು ಎಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, 'ಕೋವಿಡ್ 19 ಪೀಡಿತರು ಇರುವ ಪ್ರದೇಶದಿಂದ ಮೂರು ಕಿಲೋಮೀಟರ್ ಸುತ್ತಳತೆಯನ್ನು ಬಫರ್ ವಲಯ ಎಂದು ಗುರುತಿಸಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹತ್ತಾರು ಸರ್ಕಾರಿ ಕಚೇರಿಗಳಿವೆ. ನೂರಾರು ಮನೆಗಳಿವೆ. ಹಾಗಾಗಿ ಸೋಂಕಿತರನ್ನು ಇಲ್ಲಿಗೆ ತರುವುದರಿಂದ ಸಮಸ್ಯೆಯಾಗುತ್ತದೆ' ಎಂದು ಹೇಳಿದರು.

'ಸೋಂಕಿತರಿಗೆ ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ಮಾತ್ರ ಅವರನ್ನು ಇಲ್ಲಿ ದಾಖಲಿಸಿಕೊಳ್ಳಲಿ. ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ಮಾಡಿ ಅಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಲಿ. ಅದು ಹೊರತು ಸುಮಾರು 150 ಕಿಲೋಮೀಟರ್ ದೂರದ ಕಾರವಾರಕ್ಕೆ ಕರೆದುಕೊಂಡು ಬಂದರೆ ಕೋವಿಡ್ ಸೋಂಕು ಇಲ್ಲದ ಊರುಗಳಿಗೂ ಹಬ್ಬುವ ಸಮಸ್ಯೆಯಿದೆ' ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

'ಭಟ್ಕಳದವರಿಗೆ ಮಣಿಪಾಲ, ಉಡುಪಿಯಲ್ಲೂ ಆರೋಗ್ಯ ಸೌಲಭ್ಯಗಳು ಚೆನ್ನಾಗಿವೆ. ಇಡೀ ಭಟ್ಕಳವನ್ನು ಸೀಲ್ ಡೌನ್ ಮಾಡಿ, ಅಲ್ಲಿನ ಪ್ರತಿಯೊಬ್ಬರ ಗಂಟಲುದ್ರವದ ಪರೀಕ್ಷೆ ಮಾಡಲಿ' ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಟಾಸ್ಕ್ ಫೋರ್ಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಸತೀಶ ಸೈಲ್ ಮಾತನಾಡಿ, 'ಭಟ್ಕಳದಲ್ಲಿ ಎಲ್ಲ ಸೌಲಭ್ಯಗಳಿವೆ ಎಂದಾದರೆ ಕೋವಿಡ್ ಪೀಡಿತರಿಗೆ ಅಲ್ಲೇ ಚಿಕಿತ್ಸೆ ಕೊಡಲಿ. ಅಲ್ಲೂ ಅಗತ್ಯ ಸೌಲಭ್ಯಗಳಿರುವ ಆಸ್ಪತ್ರೆಗಳಿವೆ. ಆದರೆ, ಕೋವಿಡ್ ಪೀಡಿತರನ್ನು ಕಾರವಾರದ ಕೊರೊನಾ ವಾರ್ಡ್ ಗೆ ದಾಖಲಿಸಿದ ಬಳಿಕ ವೈದ್ಯರು ರಜೆಯ ಮೇಲೆ ತೆರಳುತ್ತಿದ್ದಾರೆ. ಸುತ್ತಮುತ್ತಲಿನ ಜನರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜನರ ಗೊಂದಲಗಳಿಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಲಿ' ಎಂದು ಆಗ್ರಹಿಸಿದರು.

ವಕೀಲ ಕೆ.ಆರ್.ದೇಸಾಯಿ ಮಾತನಾಡಿ, 'ಭಟ್ಕಳದ ಕೋವಿಡ್ ಪೀಡಿತರನ್ನು ಕಾರವಾರಕ್ಕೆ ಕರೆದುಕೊಂಡು ಬರುವ ಮೂಲಕ ಜಿಲ್ಲಾಡಳಿತ ದೊಡ್ಡ ಎಡವಟ್ಟು ಮಾಡಿದೆ. ಅವರನ್ನು 150 ಕಿಲೋಮೀಟರ್ ದೂರಕ್ಕೆ ಕರೆದುಕೊಂಡು ಬರುವಾಗ ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಜೊತೆಗಿರುತ್ತಾರೆ. ಒಂದುವೇಳೆ, ದಾರಿಮಧ್ಯೆ ಏನಾದರೂ ಅವಘಡವಾದರೆ ಯಾರು ಜವಾಬ್ದಾರಿ? ಹಾಗಾಗಿ ಈ ಬಗ್ಗೆ ಜಿಲ್ಲಾಡಳಿತ ಕೂಲಂಕಷವಾಗಿ ಪರಿಶೀಲಿಸಬೇಕು' ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.