ADVERTISEMENT

ಕಾರವಾರ: ನೌಕಾನೆಲೆ ಸುತ್ತ ಡ್ರೋನ್ ಹಾರಾಟ ನಿಷೇಧ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 13:07 IST
Last Updated 19 ಜುಲೈ 2021, 13:07 IST

ಕಾರವಾರ: ‘ಸೀಬರ್ಡ್’ ನೌಕಾನೆಲೆ ಮತ್ತು ‘ವಜ್ರಕೋಶ’ದ ಮೂರು ಕಿಲೋಮೀಟರ್ ಸುತ್ತಳತೆಯಲ್ಲಿ ಎಲ್ಲ ರೀತಿಯ ಡ್ರೋನ್‌ಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅನುಮತಿಯಿಲ್ಲದೇ ಡ್ರೋನ್ ಹಾರಾಟ ನಡೆಸಿದರೆ, ಅದನ್ನು ವಶ ಪಡಿಸಿಕೊಳ್ಳುವುದು ಅಥವಾ ನಾಶ ಮಾಡಲಾಗುವುದು ಎಂದು ಭಾರತೀಯ ನೌಕಾದಳ ಎಚ್ಚರಿಕೆ ನೀಡಿದೆ.

ಕೇಂದ್ರ ಗೃಹ ಸಚಿವಾಲಯವು ಕಾಲಕಾಲಕ್ಕೆ ತಿದ್ದುಪಡಿ ಮಾಡುವ ನಿಯಮಾವಳಿಗಳನ್ನು ಆಧರಿಸಿ ಡ್ರೋನ್ ಬಳಕೆಯನ್ನು ನಿಯಂತ್ರಿಸಲಾಗುತ್ತದೆ. ಒಂದುವೇಳೆ, ಡ್ರೋನ್ ಬಳಕೆ ಮಾಡಬೇಕೆಂದರೆ ನಾಗರಿಕ ವಿಮಾನಯಾನ ಇಲಾಖೆಯ (ಡಿ.ಜಿ.ಸಿ.ಎ) ಮಹಾ ನಿರ್ದೇಶಕರ ಅನುಮತಿ ಕಡ್ಡಾಯವಾಗಿದೆ. ಅದಕ್ಕಾಗಿ ‘ಡಿಜಿ ಸ್ಕೈ’ ವೆಬ್‌ಸೈಟ್: www.dgca.nic.in ಸಂಪರ್ಕಿಸಬಹುದು. ಅಲ್ಲಿಂದ ಪಡೆದುಕೊಂಡಿರುವ ಅನುಮತಿ ಪತ್ರದ ಪ್ರತಿಯೊಂದನ್ನು ಕರ್ನಾಟಕ ನೌಕಾನೆಲೆಯ ಕೇಂದ್ರ ಕಚೇರಿಗೆ, ಡ್ರೋನ್ ಹಾರಾಟ ನಿಗದಿಯಾಗಿರುವ ದಿನಕ್ಕಿಂತ ಕನಿಷ್ಠ ಎರಡು ವಾರಗಳ ಮೊದಲು ಸಲ್ಲಿಸಬೇಕು ಎಂದು ತಿಳಿಸಿದೆ.

ಈ ಸೂಚನೆಯನ್ನು ಉಲ್ಲಂಘಿಸಿ ಡ್ರೋನ್ ಅಥವಾ ಮಾನವರಹಿತ ವೈಮಾನಿಕ ಉಪಕರಣಗಳ ಹಾರಾಟ ಕಂಡುಬಂದರೆ, ಅವುಗಳ ನಾಶ ಮಾಡುವ ಅಧಿಕಾರವನ್ನು ನೌಕಾದಳ ಹೊಂದಿದೆ. ಅಲ್ಲದೇ ಕಾರ್ಯಾಚರಣೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.