
ಮುಂಡಗೋಡ: ಮಳೆಯಾಶ್ರಿತ ಭತ್ತ ಕೊಯ್ಲಿಗೆ ಬಂದಿದೆ. ಕೆಲವೆಡೆ ಕಟಾವು ಕಾರ್ಯ ಭರದಿಂದ ಸಾಗಿದೆ. ಇಳುವರಿ ಕುಂಠಿತದ ಆತಂಕ ಒಂದೆಡೆಯಾದರೇ, ಕೈಗೆ ಬಂದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ಕೊರಗು ಮತ್ತೊಂದೆಡೆ. ಇಳುವರಿ ಬರುತ್ತಲೇ ಮಾರುಕಟ್ಟೆಯಲ್ಲಿ ದರ ಕುಸಿತ ಆಗುತ್ತಿರುವುದು, ಭತ್ತ ಬೆಳೆಗಾರರ ಚಿಂತೆಗೆ ಕಾರಣವಾಗಿದೆ.
ಅತಿಕ್ರಮಣ ಭೂಮಿ ಹೊರತುಪಡಿಸಿ ತಾಲ್ಲೂಕಿನಲ್ಲಿ 7 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಈಗಾಗಲೇ ಯಂತ್ರಗಳ ಸಹಾಯದಿಂದ ಕಟಾವು ಕಾರ್ಯ ಆರಂಭವಾಗಿದೆ. ಸಾಂಪ್ರದಾಯಿಕ ಕೊಯ್ಲು ಮಾಡುವ ಪದ್ಧತಿ ಮರೆಯಾಗಿದ್ದು, ಮಳೆಯ ಕಾಟದಿಂದ ಪಾರಾಗಲು, ರೈತರು ಕೊಯ್ಲು ಮಾಡುವ ಯಂತ್ರಗಳ ಮೊರೆ ಹೋಗಿದ್ದಾರೆ.
‘ಕೊಯ್ಲು ಮಾಡುತ್ತಿರುವಾಗಲೇ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಭತ್ತದ ದರದಲ್ಲಿ ₹50ರಿಂದ₹100ರವರೆಗೆ ಇಳಿಕೆಯಾಗುತ್ತಿದೆ. ಆರಂಭದಲ್ಲೇ ಹೀಗಾದರೆ, ಮುಂದಿನ ದಿನಗಳಲ್ಲಿ ಭತ್ತದ ದರ ಮತ್ತಷ್ಟು ಇಳಿಯಬಹುದೇ?’ ಎಂದು ರೈತರು ಅಸಹಾಯಕರಾಗಿ ಪ್ರಶ್ನಿಸುತ್ತಿದ್ದಾರೆ.
‘ಕಳೆದ ವರ್ಷಕ್ಕೆ ಹೋಲಿಸಿದರೆ, ಭತ್ತದ ದರದಲ್ಲಿ ಪ್ರತಿ ಕ್ವಿಂಟಲ್‌ಗೆ ₹100ರಿಂದ ₹200 ವರೆಗೆ ಕಡಿಮೆಯಿದೆ. ದರದಲ್ಲಿ ಸದ್ಯ ಸ್ಥಿರತೆಯಿಲ್ಲ. ಬೇಡಿಕೆ ಹೆಚ್ಚಾದರೆ, ಭತ್ತದ ದರ ಏರಬಹುದು. ಇಲ್ಲವಾದರೆ, ಇದಕ್ಕಿಂತ ಕಡಿಮೆಯಾಗಿಯೂ ಮಾರಾಟ ಆಗಬಹುದು’ ಎನ್ನುತ್ತಾರೆ ಗಿರಣಿ ಮಾಲೀಕ ಶಿವಕುಮಾರ.
ಬೆಂಬಲ ಬೆಲೆ ಅಡಿ ಭತ್ತ ಖರೀದಿಸಲು ಸರ್ಕಾರದಿಂದ ಈಗಾಗಲೇ ಮುಂಡಗೋಡ ಹಾಗೂ ಪಾಳಾ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಮಾಹಿತಿ ಕೊರತೆಯಿಂದ ನೋಂದಣಿ ಪ್ರಕ್ರಿಯೆ ವೇಗ ಪಡೆದುಕೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಲ್ಲಿಯವರೆಗೆ ಒಟ್ಟು 17 ರೈತರು ಭತ್ತ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ.
ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ಮುಗಿದ ಕೂಡಲೇ ಭತ್ತ ಖರೀದಿ ಮಾಡಲಾಗುವುದುಮಂಜುನಾಥ ರೇವಣಕರ, ಆಹಾರ ಇಲಾಖೆ ಉಪನಿರ್ದೇಶಕ
‘ನೋಂದಣಿ ಪ್ರಕ್ರಿಯೆ ಜೊತೆಗೆ ಭತ್ತ ಖರೀದಿಯನ್ನು ಆದಷ್ಟು ಬೇಗ ಮಾಡಿದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಒಂದೆರಡು ತಿಂಗಳ ನಂತರ ಖರೀದಿ ಮಾಡುತ್ತೇವೆ ಎಂದರೆ, ಆರ್ಥಿಕವಾಗಿ ಕೈ ಸುಟ್ಟುಕೊಂಡಿರುವ ರೈತರು, ಸ್ಥಳೀಯ ವ್ಯಾಪಾರಿಗಳಿಗೆ ಮಾರಿ ಬಿಡುತ್ತಾರೆ. ಇದರಿಂದ ಸರ್ಕಾರದ ಯೋಜನೆ ರೈತರಿಗೆ ಉಪಯೋಗಕ್ಕೆ ಇಲ್ಲದಂತಾಗುತ್ತದೆ’ ಎಂದು ರೈತ ರಾಜು ಗುಬ್ಬಕ್ಕನವರ ಹೇಳಿದರು.
ಯಂತ್ರದ ಬಾಡಿಗೆ ದುಬಾರಿ
‘ಭತ್ತ ಕಟಾವು ಮಾಡಲು ಯಂತ್ರಗಳ ದರವೂ ಹೆಚ್ಚಾಗಿದೆ. ಒಂದೊಂದು ಊರಿನಲ್ಲಿ ಒಂದೊಂದು ದರ ಕೇಳುತ್ತಿದ್ದಾರೆ. ಪ್ರತಿ ಗಂಟೆಗೆ ₹1800ರಿಂದ ₹2000ರವರೆಗೆ ದರ ನಿಗದಿಪಡಿಸಿದ್ದಾರೆ. ತೆನೆ ಬಿಡುವ ಸಮಯದಲ್ಲಿ ಸುರಿದ ಮಳೆಯು ಗಟ್ಟಿ ಕಾಳುಗಳನ್ನು ಮಾಡುವಲ್ಲಿ ತಡೆಯೊಡ್ಡಿದೆ. ಇದರಿಂದ ಇಳುವರಿಯಲ್ಲಿಯೂ ಕುಂಠಿತ ಆಗಿದೆ. ಮಾರುಕಟ್ಟೆಯಲ್ಲಿ ದರವೂ ಕುಸಿಯುತ್ತಿದೆ. ಯಂತ್ರಗಳ ಬಾಡಿಗೆ ದುಬಾರಿಯಾದರೆ ರೈತರಿಗೆ ಸಮಸ್ಯೆ ಆಗಲಿದೆ’ ಎನ್ನುತ್ತಾರೆ ರೈತ ಕೋಟೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.