ADVERTISEMENT

ಭಟ್ಕಳ: ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಬಂಧನ

ಸುಳ್ಳು ಮಾಹಿತಿ ನೀಡಿ ಪಡೆದಿದ್ದ ವಿವಿಧ ದಾಖಲೆ ಜಪ್ತಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 15:12 IST
Last Updated 10 ಜೂನ್ 2021, 15:12 IST
ಭಟ್ಕಳದ ನವಾಯತ ಕಾಲೊನಿಯಲ್ಲಿ ಪಾಕಿಸ್ತಾನದ ಮಹಿಳೆ ಖತೀಜಾ ಮೆಹೆರಿನ್ ಅಕ್ರಮವಾಗಿ ವಾಸವಿದ್ದ ಮನೆ
ಭಟ್ಕಳದ ನವಾಯತ ಕಾಲೊನಿಯಲ್ಲಿ ಪಾಕಿಸ್ತಾನದ ಮಹಿಳೆ ಖತೀಜಾ ಮೆಹೆರಿನ್ ಅಕ್ರಮವಾಗಿ ವಾಸವಿದ್ದ ಮನೆ   

ಕಾರವಾರ: ಭಟ್ಕಳದಲ್ಲಿ ಆರು ವರ್ಷಗಳಿಂದ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನದ ಖತೀಜಾ ಮೆಹೆರಿನ್ ಎಂಬ ಮಹಿಳೆಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಅವರು ಸ್ಥಳೀಯ ಸಂಸ್ಥೆಗಳಿಗೆ ಸುಳ್ಳು ದಾಖಲೆಗಳನ್ನು ನೀಡಿ ಪಡಿತರ ಚೀಟಿ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದೂ ಬಯಲಾಗಿದೆ. ಅವುಗಳನ್ನೂ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಅವರು ಸುಮಾರು ಎಂಟು ವರ್ಷಗಳ ಹಿಂದೆ ಭಟ್ಕಳದ ನವಾಯತ ಕಾಲೊನಿ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬುವವರನ್ನು ದುಬೈನಲ್ಲಿ ಮದುವೆಯಾಗಿದ್ದರು. 2014ರಲ್ಲಿ ಮೂರು ತಿಂಗಳ ಪ್ರವಾಸಿ ವೀಸಾ ಪಡೆದುಕೊಂಡು ಭಟ್ಕಳಕ್ಕೆ ಬಂದಿದ್ದರು. ಬಳಿಕ ದುಬೈಗೆ ಮರಳಿದ್ದ ಅವರು, 2015ರಲ್ಲಿ ಕಳ್ಳ ಮಾರ್ಗದ ಮೂಲಕ (ನೆರೆ ದೇಶದ ಮೂಲಕ) ಭಾರತಕ್ಕೆ ಅಕ್ರಮವಾಗಿ ಪ್ರವೇಶ ಪಡೆದಿದ್ದರು. ಬಳಿಕ ಭಟ್ಕಳದಲ್ಲಿರುವ ಪತಿಯ ಮನೆಗೆ ಬಂದು ನೆಲೆಸಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.

ADVERTISEMENT

‘ಮಹಿಳೆಯು ಅಕ್ರಮವಾಗಿ ನೆಲೆಸಿರುವ ಖಚಿತ ಮಾಹಿತಿ ಲಭಿಸಿದ ಬಳಿಕ ಕೆಲವು ತಿಂಗಳಿನಿಂದ ಸ್ಥಳೀಯ ಪೊಲೀಸರು ವಿವಿಧ ತನಿಖಾ ಸಂಸ್ಥೆಗಳ ಸಹಕಾರದಿಂದ ತನಿಖೆ ಕೈಗೊಂಡಿದ್ದರು. ಕೊನೆಗೂ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆಕೆಯ ವಿರುದ್ಧ ವಿದೇಶಿಗರ ನೋಂದಣಿ ಕಾಯ್ದೆ ಉಲ್ಲಂಘನೆ ಮತ್ತು ಇತರ ಭಾರತೀಯ ದಂಡ ಸಂಹಿತೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ, ಭಟ್ಕಳ ಡಿ.ವೈ.ಎಸ್.ಪಿ ಬೆಳ್ಳಿಯಪ್ಪ ಕೆ.ಯು, ಸಿ.ಪಿ.ಐ ದಿವಾಕರ ಅವರ ಮಾರ್ಗದರ್ಶನದಂತೆ ಇನ್‌ಸ್ಪೆಕ್ಟರ್ ಬಿ.ಸುಮಾ, ಸಿಬ್ಬಂದಿ ನಾರಾಯಣ ನಾಯ್ಕ, ಮುಗ್ದುಂ ಪತ್ತೆಖಾನ್, ಲೋಕಪ್ಪ ಪತ್ತಿ, ಹೀನಾ.ಎಫ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆಶ್ರಯ ನೀಡಿದವರ ಪತ್ತೆಗೆ ಸೂಚನೆ

ಕಾರವಾರ: ಭಟ್ಕಳದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದ ಪಾಕಿಸ್ತಾನಿ ಮಹಿಳೆಯ ಬಂಧನ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸೂಚಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

‘ಮಹಿಳೆಗೆ ಆಶ್ರಯ ನೀಡಿದವರು ಮತ್ತು ಇದಕ್ಕೆ ಸಂಬಂಧಪಟ್ಟವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಲಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ’ ಎಂದು ಹೆಬ್ಬಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.