ADVERTISEMENT

ಅಡಿಕೆ ಆರೋಗ್ಯ ಅಂಶಗಳ ಪೇಟೆಂಟ್ ಅಗತ್ಯ: ಟಿ.ಎನ್.ಪ್ರಕಾಶ ಕಮ್ಮರಡಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:03 IST
Last Updated 2 ಜೂನ್ 2025, 13:03 IST
ಶಿರಸಿಯ ಟಿಎಸ್ಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ ಕಮ್ಮರಡಿ ಅವರು ಅಡಿಕೆ ಹಾಳೆ ಉತ್ಪನ್ನಗಳನ್ನು ಪ್ರದರ್ಶಿಸಿದರು
ಶಿರಸಿಯ ಟಿಎಸ್ಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ ಕಮ್ಮರಡಿ ಅವರು ಅಡಿಕೆ ಹಾಳೆ ಉತ್ಪನ್ನಗಳನ್ನು ಪ್ರದರ್ಶಿಸಿದರು   

ಶಿರಸಿ: ಅಡಿಕೆಯ ಸಮಗ್ರ  ಆರೋಗ್ಯ ಅಂಶಗಳ ಸಂಶೋಧಿಸಿ ಅದರ ಬಗ್ಗೆ ಹಕ್ಕುಪತ್ರ (ಪೇಟೆಂಟ್) ಪಡೆಯಲು ಮುಂದಾಗುವ ಅಗತ್ಯವಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗ (ಕೆಎಪಿಸಿ) ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ ಕಮ್ಮರಡಿ ಹೇಳಿದರು. 

ಅಮೆರಿಕದಲ್ಲಿ ಅಡಿಕೆ ಹಾಳೆ, ಅಡಿಕೆ ನಿಷೇಧದ ಜಾಗತಿಕ ಹುನ್ನಾರದ ಕುರಿತ ಕಾರಣ, ಪರಿಣಾಮಗಳ ಬಗ್ಗೆ ನಗರದ ಟಿಎಸ್ಎಸ್ ಸಭಾಂಗಣದಲ್ಲಿ ಸೋಮವಾರ ನಡೆದ ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಅಡಿಕೆ ಅಗೆದು, ನುಂಗುವ ಆಹಾರ ಉತ್ಪನ್ನವಾಗಿದೆ. ಆದರೆ ತಂಬಾಕು ಸೇರ್ಪಡೆಯ ಮೂಲಕ ಅದನ್ನು ಜಗಿದು ಉಗಿಯುವ ಹಂತಕ್ಕೆ ತಂದಿರುವುದು ದುರದೃಷ್ಟಕರ.  ಅಡಿಕೆ ಹಾಳೆ ತಟ್ಟೆಗಳ ನಿಷೇಧವು ಶತಮಾನದಿಂದ ಒಪ್ಪಿತ ಆಹಾರ ವ್ಯವಸ್ಥೆ ಹಾಗೂ ಅಡಿಕೆ ಬೆಳೆಗಾರರ ಆತ್ಮಾಭಿಮಾನದ ಮೇಲಿನ ದಾಳಿಯಾಗಿದೆ’ ಎಂದರು. 

ADVERTISEMENT

‘ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿರುವ ತಂಬಾಕು ಉತ್ಪನ್ನಗಳಿಗೆ ಇಲ್ಲದ ಆತಂಕ ಆಹಾರ ಉತ್ಪನ್ನವಾದ ಅಡಿಕೆಗೆ ಎದುರಾಗಿದೆ. ತಂಬಾಕು ಮಂಡಳಿ ಪ್ರಭಾವಶಾಲಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಅಡಿಕೆಗೆ ಮಂಡಳಿಯೇ ಇಲ್ಲ. ಹೀಗಾಗಿ ಮಂಡಳಿ ಸ್ಥಾಪನೆಗೆ ಒತ್ತಡ ಸೃಷ್ಟಿಯಾಗಬೇಕು ಎಂದ ಅವರು, ಅಮೆರಿಕದ ಏಕಪಕ್ಷಿಯ ಕ್ರಮ ವಿಶ್ವ ವ್ಯಾಪಾರ ಒಪ್ಪಂದಕ್ಕೆ ಹೊಂದಿಕೆಯಾಗಿರುತ್ತದೆಯೇ ಎನ್ನುವುದಕ್ಕೆ ಸ್ಪಷ್ಟಿಕರಣ ಪಡೆಯಬೇಕು. ಅಡಿಕೆ ಹಾಳೆ ತಟ್ಟೆ ಮತ್ತಿತರ ಪಾತ್ರಗಳ ಬಳಕೆಯಿಂದ ಆಹಾರ ಮಲಿನವಾಗಿ ಆರೋಗ್ಯಕ್ಕೆ ಹಾನಿಕರ ಎಂಬುದರ ಬಗ್ಗೆ ಸ್ಪಷ್ಟ ವೈಜ್ಞಾನಿಕ ಪುರಾವೆಗಳನ್ನು ಅಮೆರಿಕದಿಂದ ಪಡೆಯಬೇಕು. ದೇಶದ ಪ್ರತಿಷ್ಠಿತ ಆಹಾರ, ಆರೋಗ್ಯ, ಕೃಷಿ ವಿಚಾರಗಳ ಮೇಲೆ ಉನ್ನತ ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳ ಸಹಾಯದಿಂದ ಅಡಿಕೆಯ ಮೇಲಿನ ಈ ಅಪಪ್ರಚಾರಕ್ಕೆ ಸಂಪೂರ್ಣ ತಡೆ ಹಾಕಬೇಕು’ ಎಂದರು.

'ಅಮೆರಿಕದ ಏಕಪಕ್ಷಿಯ ಕ್ರಮವನ್ನು ಪ್ರಶ್ನಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ತಕ್ಷಣ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಈಗಾಗಲೇ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಹುಟ್ಟಿ ಬೆಳೆದ, ದೇಶ ವಿದೇಶಗಳಲ್ಲಿ ನೆಲೆಸಿರುವ ನೂರಕ್ಕೂ ಮಿಗಿಲಾದ ಪ್ರಮುಖ ವೈದ್ಯರು, ವಿಜ್ಞಾನಿಗಳು, ಶೈಕ್ಷಣಿಕ ವಲಯದ ಪ್ರಮುಖರ ಅನುಮೋದಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯದ ಅಡಿಕೆ ಬೆಳೆಗಾರರು ಮತ್ತು ಬೆಳೆಗಾರ ಸಂಸ್ಥೆಗಳು, ಜನ ಪ್ರತಿನಿಧಿಗಳು, ಜಾಗೃತರಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಸಕಾರಾತ್ಮಕ ಒತ್ತಡ ಹಾಕುವುದು ಅತ್ಯಗತ್ಯವಾಗಿದೆ. ಸಹಕಾರಿ ಸಂಸ್ಥೆಗಳು ಅಡಿಕೆಯ ಆರೋಗ್ಯ ಅಂಶಗಳ ಸಂಶೋಧನೆ ನಡೆಸಿ ಅದರ ಮೇಲೆ ಪೇಟೆಂಟ್ ಪಡೆದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ' ಎಂದು ಹೇಳಿದರು. 

ಅಡಿಕೆ ಮಹಾಮಂಡಳಿ ಅಧಿಕಾರಿ ಮಂಜುನಾಥ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಪರಿಸರ ಕಾರ್ಯಕರ್ತ ಶಿವಾನಂದ ಕಳವೆ, ವಿಜ್ಞಾನಿ ತೇಜಸ್ವಿನಿ ಪ್ರಕಾಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.