ADVERTISEMENT

ಸಾಹಿತಿ ಶಿವರಾಮ ಕಾರಂತ ಪರ ಪ್ರಚಾರ ನಡೆಸಿದ್ದ ಪೇಜಾವರ ಶ್ರೀ

ಉತ್ತರ ಕನ್ನಡದ ಹಲವು ಹೋರಾಟಗಳಲ್ಲಿ ಸ್ವಾಮೀಜಿ ಮಾರ್ಗದರ್ಶನ: ನಿಧನಕ್ಕೆ ಭಕ್ತರ ಕಂಬನಿ

ಸದಾಶಿವ ಎಂ.ಎಸ್‌.
Published 29 ಡಿಸೆಂಬರ್ 2019, 10:41 IST
Last Updated 29 ಡಿಸೆಂಬರ್ 2019, 10:41 IST
ಕೈಗಾ ಅಣು ವಿದ್ಯುತ್ ಸ್ಥಾವರದ ವಿಸ್ತರಣೆ ವಿರೋಧಿಸಿ ಕಾರವಾರ ತಾಲ್ಲೂಕಿನ ಮಲ್ಲಾಪುರದಲ್ಲಿ ನ.17ರಂದು ನಡೆದ ಸಮಾವೇಶದಲ್ಲಿ ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ಭಾಗವಹಿಸಿದ್ದು ಜಿಲ್ಲೆಗೆ ಅವರ ಕೊನೆಯ ಭೇಟಿಯಾಯಿತು - ಪ್ರಜಾವಾಣಿ ಚಿತ್ರ
ಕೈಗಾ ಅಣು ವಿದ್ಯುತ್ ಸ್ಥಾವರದ ವಿಸ್ತರಣೆ ವಿರೋಧಿಸಿ ಕಾರವಾರ ತಾಲ್ಲೂಕಿನ ಮಲ್ಲಾಪುರದಲ್ಲಿ ನ.17ರಂದು ನಡೆದ ಸಮಾವೇಶದಲ್ಲಿ ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ಭಾಗವಹಿಸಿದ್ದು ಜಿಲ್ಲೆಗೆ ಅವರ ಕೊನೆಯ ಭೇಟಿಯಾಯಿತು - ಪ್ರಜಾವಾಣಿ ಚಿತ್ರ   

ಕಾರವಾರ:ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗೂ ಉತ್ತರ ಕನ್ನಡ ಜಿಲ್ಲೆಗೂ ಅವಿನಾಭಾವ ನಂಟಿದೆ. ಕೈಗಾ ಅಣುಸ್ಥಾವರದ ವಿರುದ್ಧ 1987ರಲ್ಲಿನಡೆದ ಹೋರಾಟದಿಂದ ಆರಂಭವಾಗಿ, ಸ್ಥಾವರದ ವಿಸ್ತರಣೆಯ ವಿರುದ್ಧ ಈ ವರ್ಷ ನ.17ರಂದು ನಡೆದ ಸಮಾವೇಶದವರೆಗೂ ಅವರ ಮಾರ್ಗದರ್ಶನವಿದೆ.

ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ 1987ರ ಮಾರ್ಚ್‌ನಲ್ಲಿ ಜಿಲ್ಲೆಯಲ್ಲಿ ಭಾರಿ ಹೋರಾಟ ಏರ್ಪಟ್ಟಿತ್ತು. ಹೋರಾಟ ಸಮಿತಿಯ ಮುಖಂಡರು ನೇತೃತ್ವ ವಹಿಸುವಂತೆ ಸ್ವಾಮೀಜಿಯನ್ನು ಕೋರಿದ್ದರು. ಅದಕ್ಕೆ ಸಮ್ಮತಿಸಿದ ಅವರು, ಉಡುಪಿಯಿಂದ ಯಲ್ಲಾಪುರಕ್ಕೆ ಆಗಮಿಸಿದ್ದರು. ಬಳಿಕ ಸಮೀಪದ ಬಾರೆ ಗ್ರಾಮದಿಂದ ಪಾದಯಾತ್ರೆಯಲ್ಲಿ ಕೈಗಾದತ್ತ ಸಾಗಿ ಬಂದಿದ್ದರು.

ಹೋರಾಟಗಾರರ ಬಳಿಗೆ ಬಂದಿದ್ದಅಣು ವಿದ್ಯುತ್ ಸ್ಥಾವರದಅಂದಿನನಿರ್ದೇಶಕ ಪರಮಹಂಸ ತಿವಾರಿ, ಸ್ವಾಮೀಜಿಗೆ ನಮಸ್ಕರಿಸಿ ಯೋಜನೆಯ ಮಾಹಿತಿ ನೀಡಿದ್ದರು.

ADVERTISEMENT

ಪ್ರತಿಭಟನೆಯ ಆ ದಿನಗಳನ್ನು ನೆನೆದ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ,‘ಕೈಗಾ ಸ್ಥಾವರದ ಮೊದಲು ಎರಡು ಘಟಕಗಳ ಸ್ಥಾಪನೆಗೆ ಹೊಂಡ ತೆಗೆಯುತ್ತಿದ್ದ ಸಂದರ್ಭದಲ್ಲೇ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ನಿಷೇಧಿತ ವಲಯವನ್ನು ಪ್ರವೇಶಿಸಿದ್ದ ಕಾರಣ ನಮ್ಮನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಅಲ್ಲಿಂದ ಕರೆದುಕೊಂಡು ಬಂದು ಕಾರವಾರದಲ್ಲಿ ಬಿಟ್ಟರು’ಎಂದು ಹೇಳಿದರು.

ಈ ವರ್ಷ ನ.17ರಂದು ಮಲ್ಲಾಪುರದಲ್ಲಿ ಹಮ್ಮಿಕೊಂಡ ಐದು ಮತ್ತು ಆರನೇ ಘಟಕಗಳ ಸ್ಥಾಪನೆ ವಿರೋಧಿ ಸಮಾವೇಶದಲ್ಲಿ ಪೇಜಾವರ ಸ್ವಾಮೀಜಿ ಭಾಗವಹಿಸಿದ್ದರು. 1987ರಲ್ಲಿತಾವೂಒಂದು ಗಂಟೆ ಪೊಲೀಸರ ವಶದಲ್ಲಿ ಇದ್ದುದನ್ನು ಅವರು ಅಂದು ನೆನಪಿಸಿಕೊಂಡಿದ್ದರು.

‘ಆಗ ಭಾರಿ ಹೋರಾಟ ನಡೆದರೂ ಏನೂ ಪ್ರಯೋಜನವಾಗಲಿಲ್ಲ. ಈಗ ಮತ್ತೆ ವಿಸ್ತರಣೆ ನಡೆಯುತ್ತಿದೆ. ಈ ಸಲ ಹಿಂದಿನಂತೆ ಆಗಬಾರದು. ಒಟ್ಟಾಗಿ ಹೋರಾಡಬೇಕು.ಕೈಗಾ ಎಂಬುದು ಪರಿಸರ, ನೀರಲ್ಲಿ ವಿಷ ಉಗುಳುವ ಕಾಳಿಂಗ ಇದ್ದಂತೆ. ಅಂದು ಕೃಷ್ಣ ನೆಲ, ಜಲ ರಕ್ಷಣೆಗಾಗಿ ಕಾಳಿಂಗವನ್ನು ವಧಿಸಿದ.ಕೃಷ್ಣನ ಭಕ್ತರಾದ ನಾವೆಲ್ಲರೂಒಟ್ಟಾಗಿಕೈಗಾ ಎಂಬ ಕಾಳಿಂಗನ ವಿರುದ್ಧ ಇಂದು ಹೋರಾಡಬೇಕು’ ಎಂದು ಕರೆ ನೀಡಿದ್ದರು.

ನೇತೃತ್ವಕ್ಕೆ ಸಿದ್ಧ ಎಂದಿದ್ದರು:‘ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆ ವಿರುದ್ಧ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ಕರೆದುಕೊಂಡು ಹೋಗಲು ಸಿದ್ಧನಿದ್ದೇನೆ. ಈ ಹೋರಾಟದಲ್ಲಿ ಇರುವ ಎಲ್ಲರೂ ನಮ್ಮ ಜೊತೆಯಾಗಬೇಕು’ ಎಂದೂ ಅವರು ಹೋರಾಟಗಾರರಿಗೆ ತಿಳಿಸಿದ್ದರು.

ಶರಾವತಿ ಕಣಿವೆಯ ಟೇಲರೇಸ್ ವಿರುದ್ಧದ ಹೋರಾಟದಲ್ಲೂ ಸ್ವಾಮೀಜಿ ಮುಂದಾಳತ್ವ ವಹಿಸಿದ್ದರು. ‘ನದಿ ತಿರುವು ಯೋಜನೆ’ ವಿಷಯದಲ್ಲಿ ‘ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ’ಯು 2002–03ರಲ್ಲಿ ಉಡುಪಿಯ ಕೃಷ್ಣ ಮಠದಲ್ಲಿ ಸಭೆ ಹಮ್ಮಿಕೊಂಡಿತ್ತು. ಅದರಲ್ಲಿವಿಶ್ವೇಶತೀರ್ಥ ಸ್ವಾಮೀಜಿಅಷ್ಟಮಠಗಳಎಲ್ಲ ಯತಿಗಳನ್ನೂ ಒಗ್ಗೂಡಿಸಿದ್ದರು ಎಂದು ಅನಂತ ಹೆಗಡೆಅಶೀಸರ ಸ್ಮರಿಸಿದರು.

ಕಾರಂತರ ಪರ ಪ್ರಚಾರ:1989ರಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಜೋರಾಗಿದ್ದ ಸಮಯದಲ್ಲೇ ಲೋಕಸಭಾ ಚುನಾವಣೆಯೂ ಘೋಷಣೆಯಾಗಿತ್ತು.ರಾಜ್ಯದಪರಿಸರ ಸಂರಕ್ಷಣೆಯ ಗಟ್ಟಿ ಧ್ವನಿಗಳಲ್ಲಿ ಒಬ್ಬರಾಗಿದ್ದ ಸಾಹಿತಿ ಶಿವರಾಮ ಕಾರಂತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಪರ ಪ್ರಚಾರಕ್ಕೆ ವಿಶ್ವೇಶತೀರ್ಥ ಸ್ವಾಮೀಜಿ ಅಂಕೋಲಾಕ್ಕೆ ಬಂದಿದ್ದರು. ನವೆಂಬರ್ ತಿಂಗಳ ಒಂದು ದಿನ ರಾತ್ರಿ ಅವರು ಕಾರಂತರ ಪರ ಭಾಷಣ ಮಾಡಿದ್ದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಕೋಟಿ ಗಾಯತ್ರಿ ಜಪ:2014ರಲ್ಲಿ ಡಿ.26ರಿಂದ 28ರವರೆಗೆ ಕಾರವಾರದ ಮಾಲಾದೇವಿ ದೇವಸ್ಥಾನದ ಮೈದಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ‘ಕೋಟಿ ಗಾಯತ್ರಿ ಜಪ’ ಹಮ್ಮಿಕೊಳ್ಳಲಾಗಿತ್ತು. ಮೂರುದಿನಗಳ ಕಾರ್ಯಕ್ರಮಗಳಲ್ಲಿ ಪೇಜಾವರ ಸ್ವಾಮೀಜಿ ಎರಡು ದಿನ ಭಾಗವಹಿಸಿದ್ದರು.ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ಡಿ.28ಕ್ಕೆ ಐದು ವರ್ಷಗಳಾದವು. ಅವರು ಹಬ್ಬುವಾಡಾದ ರಾಘವೇಂದ್ರ ಮಠದಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.