ADVERTISEMENT

ಮಳೆ ನಿಂತರೂ ಅಡಿಕೆಗೆ ನಿಲ್ಲದ ಹಾನಿ

ಪೆಂಟಟೋಮಿಡ್ ಬಾಧೆಗೆ ಉದುರುತ್ತಿರುವ ಮಿಳ್ಳೆಗಳು

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 16:09 IST
Last Updated 29 ಜುಲೈ 2022, 16:09 IST
ಪೆಂಟಟೊಮಿಡ್ ಕೀಟ ಬಾಧೆಗೆ ಉದುರಿ ಬಿದ್ದಿರುವ ಅಡಿಕೆ ಮಿಳ್ಳೆಗಳು.
ಪೆಂಟಟೊಮಿಡ್ ಕೀಟ ಬಾಧೆಗೆ ಉದುರಿ ಬಿದ್ದಿರುವ ಅಡಿಕೆ ಮಿಳ್ಳೆಗಳು.   

ಶಿರಸಿ: ಜುಲೈ ಆರಂಭದಲ್ಲಿ ಸುರಿದ ಭಾರಿ ಮಳೆಯಿಂದ ಅಲ್ಲಲ್ಲಿ ಅಡಿಕೆಗೆ ಕೊಳೆರೋಗ ಆವರಿಸಿಕೊಂಡು ರೈತರು ಚಿಂತೆಗೀಡಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಜುಲೈ ಕಳೆಯುತ್ತ ಬಂದರೂ ಪೆಂಟಟೊಮಿಡ್ ಕೀಟಬಾಧೆ ನಿಲ್ಲದಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.

ಮಲೆನಾಡು, ಅರೆ ಮಲೆನಾಡು ಭಾಗದ ನೂರಾರು ಎಕರೆ ತೋಟಗಳಲ್ಲಿ ಪೆಂಟಟೊಮಿಡ್ ಕೀಟಗಳ ಹಾವಳಿ ಹೆಚ್ಚಿದೆ. ಇದರಿಂದ ಅಡಿಕೆ ಮಿಳ್ಳೆಗಳು ಉದುರಿ ಬೀಳಲಾರಂಭಿಸಿವೆ. ಬೇಸಿಗೆ ಅವಧಿಯಲ್ಲೂ ಈ ಪ್ರಮಾಣ ವ್ಯಾಪಕವಾಗಿತ್ತು. ಮಳೆಗಾಲದಲ್ಲೂ ಸಮಸ್ಯೆ ಮುಂದುವರೆದಿದೆ.

ತಾಲ್ಲೂಕಿನ ಸಂಪಖಂಡ, ದೇವನಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಡಿಕೆಗೆ ಅತಿಯಾದ ಮಳೆಯಿಂದ ಕೊಳೆರೋಗ ಆವರಿಸಿಕೊಂಡಿದೆ. ಇದರಿಂದ ಸಾಕಷ್ಟು ಪ್ರಮಾಣದ ಅಡಿಕೆ ಉದುರಿ ಹಾಳಾಗುತ್ತಿದೆ. ಪೆಂಟಟೊಮಿಡ್ ಕೀಟ ಹಾವಳಿ ತಾಲ್ಲೂಕಿನ ಬಹುಪಾಲು ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು ನೂರಾರು ಕ್ವಿಂಟಲ್ ಅಡಿಕೆ ಬೆಳೆ ಹಾನಿಗೀಡಾಗಿದೆ.

ADVERTISEMENT

ಏನಿದು ಪೆಂಟಟೊಮಿಡ್?

ಪೆಂಟಟೊಮಿಡ್ ಬಗ್ ಎಂಬ‌ ಹುಳುಗಳು ಬೆಳವಣಿಗೆ ಹಂತದ ಅಡಿಕೆ ಗೊನೆಗಳ ಮೇಲೆ ಅಧಿಕ ಪ್ರಮಾಣಲ್ಲಿ ಕುಳಿತುಕೊಳ್ಳುತ್ತವೆ. ಎಳೆ ಅಡಿಕೆ ಮಿಳ್ಲೆಗಳ ರಸವನ್ನು ಹೀರುತ್ತವೆ. ರಸ ಹೀರಿದ ಬಳಿಕ ಬೆಳವಣಿಗೆಯಲ್ಲಿ ವ್ಯತ್ಯಾಸವಾಗಿ ಮಿಳ್ಳೆಗಳು ಉದುರುತ್ತವೆ.

‘ಮಳೆ ವಿಪರೀತವಾಗಿದ್ದರಿಂದ ಕೊಳೆರೋಗ ಕಾಣಿಸಿಕೊಳ್ಳುವ ಆತಂಕವಿತ್ತು. ಮಳೆ ನಿಯಂತ್ರಣಕ್ಕೆ ಬಂದಿದ್ದರಿಂದ ಈ ಸಮಸ್ಯೆ ಉಂಟಾಗಿಲ್ಲ. ಆದರೆ ಕೀಟಗಳ ಹಾವಳಿಯಿಂದ ಅಡಿಕೆ ಮಿಳ್ಲೆಗಳು ವ್ಯಾಪಕ ಪ್ರಮಾಣದಲ್ಲಿ ಉದುರಿ ಹಾಳಾಗಿದ್ದು ಬೇಸರವಾಗಿದೆ’ ಎನ್ನುತ್ತಾರೆ ಮತ್ತಿಗಾರಿನ ಮಂಜುನಾಥ ಹೆಗಡೆ.

‘ಹಳೆಯ ಅಡಿಕೆ ತೋಟಗಳಲ್ಲಿ ಕೀಟಗಳ ಸಮಸ್ಯೆ ಅಷ್ಟಾಗಿ ಬಾಧಿಸುತ್ತಿಲ್ಲ. ಹೊಸ ಅಡಕೆ ತೋಟಗಳಲ್ಲಿ ಹೆಚ್ಚು ಬಾಧಿಸಿದೆ. ಕೀಟಗಳು 30 ಅಡಿಯವೆಗೆ ಮಾತ್ರ ಹಾರುವುದರಿಂದ ಚಿಕ್ಕ ಮರಗಳಲ್ಲಿ ಜಾಸ್ತಿ ಅಡಿಕೆ ಉದುರುತ್ತಿವೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ.

‘ಸಾಮಾನ್ಯವಾಗಿ ಜುಲೈ ಬಳಿಕ ಅಡಿಕೆ ಬೆಳೆಯುತ್ತಿದ್ದಂತೆ ಕೀಟಗಳು ನಿಯಂತ್ರಣಕ್ಕೆ ಬರುತ್ತವೆ. ಪ್ರತಿ ಲೀ. ನೀರಿಗೆ ತಲಾ 1.5 ಮಿ.ಲೀ. ಎಮಿಡಾಕ್ಲೊರೋಪಿಡ್ ದ್ರಾವಣ ಸೇರಿಸಿ ಅಡಿಕೆ ಗೊನೆಗೆ ಸಿಂಪಡಣೆ ಮಾಡಬೇಕು. ಇದರಿಂದ ಕೀಟಗಳ ಹಾವಳಿ ನಿಯಂತ್ರಣಕ್ಕೆ ಬರುತ್ತದೆ’ ಎಂದು ತಿಳಿಸಿದರು.

150 ಎಕರೆ ಹಾನಿ:

ಜು.1 ರಿಂದ 15ರ ವರೆಗೆ ನಿರಂತರ ಸುರಿದಿದ್ದ ಮಳೆಯಿಂದ ತಾಲ್ಲೂಕಿನ ಹಲವೆಡೆ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ತೋಟಗಾರಿಕಾ ಇಲಾಖೆಯ ಪ್ರಾಥಮಿಕ ಸಮೀಕ್ಷೆ ಪ್ರಕಾರ ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.

‘ಸಂಪಖಂಡ ಸುತ್ತಮುತ್ತಲಿನ ಗ್ರಾಮದಲ್ಲಿ ಕೊಳೆರೋಗ ಹೆಚ್ಚು ಕಾಣಿಸಿಕೊಂಡಿತ್ತು. ನಂತರ ಇದು ಹಲವು ಕಡೆ ವ್ಯಾಪಿಸಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಸಮೀಕ್ಷೆ ನಡೆಸಬೇಕಿದ್ದು ಹಾನಿ ಪ್ರಮಾಣ ಏರಿಕೆಯಾಗಲಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.