ADVERTISEMENT

ಅಂಕೋಲಾ ತೆಂಗಿನ ಮರಗಳಿಗೆ ಕೀಟಬಾಧೆ: ಕೃಷಿ ವಿಜ್ಞಾನಿಗಳ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 4:22 IST
Last Updated 26 ಫೆಬ್ರುವರಿ 2026, 4:22 IST
ಅಂಕೋಲಾ ತಾಲ್ಲೂಕಿನಲ್ಲಿ ಕೀಟಬಾಧೆಯಿಂದ ಒಣಗಿಹೋದ ತೆಂಗಿನ ತೋಟಗಳಿಗೆ ಶಿರಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು
ಅಂಕೋಲಾ ತಾಲ್ಲೂಕಿನಲ್ಲಿ ಕೀಟಬಾಧೆಯಿಂದ ಒಣಗಿಹೋದ ತೆಂಗಿನ ತೋಟಗಳಿಗೆ ಶಿರಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು   

ಅಂಕೋಲಾ: ತಾಲ್ಲೂಕಿನಾದ್ಯಂತ ಕಳೆದ ಹಲವು ತಿಂಗಳಿನಿಂದ ತೆಂಗಿನ ಮರಗಳಿಗೆ ಕೆಂಪು ಮೂತಿ ದುಂಬಿ ಹುಳುಗಳ ದಾಳಿಯಿಂದ ತೆಂಗಿನ ಮರಗಳು ರೋಗಭಾದೆಗೆ ಒಳಗಾಗಿ ಒಣಗಿಹೋಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ಈ ಹಿನ್ನೆಲೆ ತಾಲ್ಲೂಕಿನ ಹಿಚಕಡ ಶೇಟಗೇರಿ, ಕಣಗಿಲ್ ಮತ್ತು ಮೋಗಟಾ ಗ್ರಾಮದ ತೋಟಗಳಿಗೆ ಶಿರಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

‘ಈ ಕೀಟದ ಹಾವಳಿ ಸಾಮಾನ್ಯವಾಗಿ ಏಪ್ರಿಲ್, ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಂಡುಬರುತ್ತಿದ್ದು, ಕೀಟದ ಮರಿ ಹುಳುಗಳು ಕಾಂಡವನ್ನು ಕೊರೆದು, ಒಳಗಿರುವ ಮೃದು ಭಾಗವನ್ನು ತಿಂದು ಹಾನಿ ಉಂಟು ಮಾಡುತ್ತವೆ. ಈ ಕೀಟದ ಬಾಧೆಗೆ ತುತ್ತಾದ ಮರಗಳಲ್ಲಿ ಕಾಂಡದ ಮೇಲೆ ಚಿಕ್ಕ ಚಿಕ್ಕ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಇದರ ಹಾವಳಿಯು ಹೊರ ಭಾಗದಲ್ಲಿ ಕಾಣಿಸದೇ, ಮರ ಬಿದ್ದು ಹೋಗುತ್ತದೆ’ ಎಂದು ವಿಜ್ಞಾನಿಗಳು ರೈತರಿಗೆ ರೋಗದ ಲಕ್ಷಣದ ಕುರಿತು ಮಾಹಿತಿ ನೀಡಿದರು.

‘ರೈತರು ತಮ್ಮ ತೋಟದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತೋಟದ ಮರಗಳಲ್ಲಿ ಯಾವುದೇ ಕೀಟಗಳು ಅಥವಾ ಕೀಟ ಬಾಧಿತ ಭಾಗಗಳು ಕಂಡು ಬಂದಾಗ ಅವುಗಳನ್ನು ತೆಗೆದು ನಾಶಮಾಡಬೇಕು. ತೆಂಗಿನ ತೋಟಗಳಲ್ಲಿ ರೈತರು ಅಂತರ ಬೆಳೆಯಾಗಿ ಶುಂಠಿ, ಅರಿಶಿಣ, ಬಾಳೆ, ವೆನಿಲಾ, ಮೆಣಸು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುವುದರಿಂದ ವರಮಾನವನ್ನು ಹೆಚ್ಚಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ADVERTISEMENT

ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥೆ ರೂಪಾ ಪಾಟೀಲ, ತೋಟಗಾರಿಕೆ ವಿಷಯ ತಜ್ಞರಾದ ಹರೀಶ, ಕೃಷಿ ವಿಜ್ಞಾನಿ ಅಮೀತ್, ಬೊಮ್ಮಯ್ಯ ನಾಯಕ, ಜಯರಾಮ ನಾಯಕ, ಮಂಜುನಾಥ್ ನಾಯಕ, ಮಾರುತಿ ನಾಯಕ ಮೊಗಟಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.