ADVERTISEMENT

ಶಿರಸಿ: ಶಾಲ್ಮಲೆಯ ಒಡಲಲ್ಲಿ ಪ್ಲಾಸ್ಟಿಕ್ ಹಾವಳಿ

ಗ್ರಾಮೀಣ ಪರಿಸರ ಮಲಿನಗೊಳಿಸುತ್ತಿರುವ ನಗರದ ತ್ಯಾಜ್ಯ

ಸಂಧ್ಯಾ ಹೆಗಡೆ
Published 30 ಸೆಪ್ಟೆಂಬರ್ 2019, 19:31 IST
Last Updated 30 ಸೆಪ್ಟೆಂಬರ್ 2019, 19:31 IST
ಶಿರಸಿ ತಾಲ್ಲೂಕಿನ ದೇವರಹೊಳೆ ಸೇತುವೆ ಕೆಳಗೆ ತೇಲಿ ಬಂದು ನಿಂತಿರುವ ತ್ಯಾಜ್ಯದ ರಾಶಿ
ಶಿರಸಿ ತಾಲ್ಲೂಕಿನ ದೇವರಹೊಳೆ ಸೇತುವೆ ಕೆಳಗೆ ತೇಲಿ ಬಂದು ನಿಂತಿರುವ ತ್ಯಾಜ್ಯದ ರಾಶಿ   

ಶಿರಸಿ: ಪಂಚಭೂತಗಳನ್ನು ಬೆಂಬಿಡದೇ ಕಾಡುತ್ತಿರುವ ಪ್ಲಾಸ್ಟಿಕ್, ಗ್ರಾಮೀಣ ಪರಿಸರವನ್ನು ಸಹ ಕಲುಷಿತಗೊಳಿಸಿದೆ. ತಿಳಿನೀರಿನ ನದಿಗಳು, ಹೊಳೆಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳು ಶುದ್ಧ ವಾತಾವರಣವನ್ನು ಮಲಿನಗೊಳಿಸುತ್ತಿವೆ.

ಈ ಬಾರಿಯ ಅತಿವೃಷ್ಟಿಯ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲ ಹೊಳೆ, ನದಿಗಳು ಉಕ್ಕಿ ಹರಿದಿದ್ದಿದ್ದವು. ರಭಸದಿಂದ ಹರಿದ ನೀರಿನ ಜೊತೆಗೆ ಕೊಚ್ಚಿಕೊಂಡು ಬಂದಿದ್ದ ತ್ಯಾಜ್ಯಗಳು ಸೇತುವೆಯ ಕಂಬಗಳ ನಡುವೆ ಸಿಲುಕಿಕೊಂಡಿದ್ದವು. ನೆರೆ ಇಳಿದ ಮೇಲೆ ಈ ತ್ಯಾಜ್ಯಗಳಲ್ಲಿ ರಾಶಿಯಲ್ಲಿ ಕಣ್ಣಿಗೆ ರಾಚುತ್ತಿರುವುದು ಕುಡಿದು ಎಸೆದ ನೀರಿನ ಬಾಟಲಿಗಳು, ತಂಪು ಪಾನೀಯದ ಬಾಟಲಿ ಹಾಗೂ ತಿನಿಸುಗಳನ್ನು ತಿಂದು ಬೀಸಾಡಿರುವ ಪ್ಲಾಸ್ಟಿಕ್ ಕವರ್‌ಗಳು !

ತಾಲ್ಲೂಕಿನ ಕೆಂಗ್ರೆಹೊಳೆ, ದೇವರಹೊಳೆ ಸೇತುವೆಯ ತಳಭಾಗ ನೋಡಿದರೆ, ಭಯಾನಕ ದೃಶ್ಯ ಗೋಚರಿಸುತ್ತದೆ. ತೇಲಿ ಬಂದಿರುವ ಕಟ್ಟಿಗೆ, ಬಿದಿರು ದಿಬ್ಬದಂತೆ ರೂಪುಗೊಂಡಿವೆ. ಅದರ ಮೇಲೆ ನೂರಾರು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳು ಬಿದ್ದುಕೊಂಡಿವೆ.

ADVERTISEMENT

‘ಬಿದಿರಿಗೆ ಕಟ್ಟೆ ಬಂದಿದ್ದರಿಂದ ಮುರಿದು ಬಿದ್ದ ಬಿದಿರು ತೇಲಿ ಬಂದು ಸೇತುವೆ ಕೆಳಗೆ ಸಿಕ್ಕಿಕೊಂಡಿದೆ. ಪ್ರತಿವರ್ಷ ಬರುವ ಕಸದಲ್ಲಿ ಪ್ಲಾಸ್ಟಿಕ್ ಜಾಸ್ತಿ ಇರುತ್ತದೆ. ನಗರದ ತ್ಯಾಜ್ಯಗಳು ಗ್ರಾಮೀಣ ಪರಿಸರ ಹಾಳುಮಾಡುತ್ತಿವೆ. ಸಹಸ್ರಲಿಂಗ ಮತ್ತು ದೇವರಹೊಳೆ ಹೊರಗಿನವರಿಗೆ ಪ್ರವಾಸಿ ತಾಣಗಳು. ಆದರೆ, ಸ್ಥಳೀಯರಿಗೆ ಈ ಪ್ರದೇಶಕ್ಕೆ ಹೋಗಲು ಭಯವಾಗುತ್ತದೆ. ಕುಡುಕರು, ಮದ್ಯದ ಬಾಟಲಿ ಹಾವಳಿ ಹೆಚ್ಚಾಗಿದೆ. ಮಹಿಳೆಯರು ಮಕ್ಕಳು ತಮ್ಮ ಊರಿನ ತಾಣಕ್ಕೆ ಹೋಗಿ ನಿರಾಳವಾಗಿ ಕುಳಿತುಕೊಳ್ಳಲೂ ಆಗದು ಎಂದು ಬೇಸರಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿ.

ನಗರದಲ್ಲಿ ಕಸ ಹಾಕುವವರ ಮೇಲೆ ನಿರಂತರ ನಿಗಾವಹಿಸಿದ ಪರಿಣಾಮ ಕಾಲೇಜು ರಸ್ತೆ, ಬನವಾಸಿ ರಸ್ತೆಯಲ್ಲಿ ಕಸ ಚೆಲ್ಲುವುದು ಕಡಿಮೆಯಾಗಿದೆ. ಆದರೆ, ಹೊರ ಪ್ರದೇಶದವರು ಕೆಲವೊಮ್ಮೆ ಕಸ ತಂದು ಹಾಕುತ್ತಾರೆ. ನಗರದ ಹೊರವಲಯದಲ್ಲಿ ಕಸ ಹಾಕುವುದು ಹೆಚ್ಚಾಗಿದೆ. ನಗರಸಭೆ ಕಸ ಹಾಕುವವರ ಮೇಲೆ ಕ್ರಮವಹಿಸುವ ಜತೆಗೆ ಯಂತ್ರ ಆಧಾರಿತ ಕೆಲಸವನ್ನು ಹೆಚ್ಚಿಸಬೇಕು. ಕಸ ಸಂಸ್ಕರಣೆ ಯಂತ್ರ ಖರೀದಿಸಬೇಕು ಎಂದು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಸಲಹೆ ಮಾಡಿದರು.

‘ದೇವರಹೊಳೆಯ ಬಾಂದಾರಸಹಿತ ಸೇತುವೆಯನ್ನು ಸಣ್ಣ ನೀರಾವರಿ ಇಲಾಖೆ ನಿರ್ವಹಣೆ ಮಾಡುತ್ತದೆ. ಸೇತುವೆಯ ತಳಭಾಗ ಸ್ವಚ್ಛಗೊಳಿಸುವ ಸಂಬಂಧ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಜೊತೆ ಮಾತನಾಡಲಾಗುವುದು’ ಎಂದು ಭೈರುಂಬೆ ಪಂಚಾಯ್ತಿ ಪಿಡಿಒ ಶ್ರೀಧರ ಹೆಗಡೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.