
ಕಾರವಾರ: ಇಲ್ಲಿನ ಗುನಗಿವಾಡಾದಲ್ಲಿನ ಕೃಷಿಭೂಮಿಗೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಕಸದ ರಾಶಿ ನುಗ್ಗುತ್ತಿದ್ದು, ರೈತರಿಗೆ ಸಮಸ್ಯೆ ಎದುರಾಗಿದೆ.
‘ಪ್ರತಿ ಮಳೆಗಾಲದಲ್ಲಿ ಪಕ್ಕದಲ್ಲಿನ ಕಾಲುವೆ ನೀರು ಜಮೀನಿಗೆ ನುಗ್ಗುತ್ತಿದೆ. ಮಳೆಗಾಲದಲ್ಲಿ ಕೃಷಿ ಮಾಡಲು ಆಗುತ್ತಿಲ್ಲ. ಮಳೆಗಾಲ ಮುಗಿದ ಬಳಿಕ ಭೂಮಿ ಹಸನುಗೊಳಿಸುವ ಮುನ್ನ ಕಸದ ರಾಶಿ ತೆರವುಗೊಳಿಸುವುದೇ ದೊಡ್ಡ ಕೆಲಸವಾಗಿದೆ’ ಎಂದು ಕೃಷಿ ಕಾಯಕದಲ್ಲಿ ತೊಡಗಿರುವ ಅಂಗವಿಕಲ ಗಿರಿಧರ ಗುನಗಿ ದೂರಿದರು.
ಕಾಲಿನ ಸ್ವಾಧೀನ ಕಳೆದುಕೊಂಡಿರುವ ಗಿರಿಧರ ತಮ್ಮ ವೃದ್ಧ ತಾಯಿಯ ಜೊತೆಗೆ ಕೃಷಿ ಮಾಡುತ್ತಿದ್ದಾರೆ. ಸಾವಯವ ಪದ್ಧತಿಯಲ್ಲಿ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಗದ್ದೆಯನ್ನು ಉಳುಮೆ ಮಾಡಲು ಮುಂದಾದ ವೇಳೆ ಕೆಜಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಗದ್ದೆಯುದ್ದಕ್ಕೂ ಆವರಿಸಿಕೊಂಡಿದ್ದನ್ನು ಕಂಡು ಬೇಸರಗೊಂಡಿದ್ದಾರೆ.
‘ಈ ಮೊದಲು ಕಾಲುವೆಯಿಂದ ನೀರು ನುಗ್ಗುವ ಸಮಸ್ಯೆ ಇರಲಿಲ್ಲ. ಮರಿಯಾ ನಗರ ಭಾಗದ ಮೂಲಕ ಕಾಲುವೆ ನೀರು ಹರಿದು ಹೋಗುತ್ತಿತ್ತು. ಕೆಲವರು ಕಾಲುವೆಯ ದಿಕ್ಕು ಬದಲಿಸಿದ್ದಾರೆ. ಈ ಬಗ್ಗೆ ನಗರಸಭೆಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೂ, ಸ್ಪಂದನೆ ಸಿಕ್ಕಿಲ್ಲ. ಮಳೆ ನೀರಿನೊಂದಿಗೆ ಹರಿದು ಬಂದ ತ್ಯಾಜ್ಯಗಳು ಗದ್ದೆಯ ತುಂಬ ಹರಿಡಕೊಂಡಿವೆ. ರಸ್ತೆ ಬದಿಯಲ್ಲೇ ಇರುವ ಜಮೀನಿಗೆ ರಾತ್ರಿ ವೇಳೆ ಕಸ ಎಸೆದು ಹೋಗುವವರೂ ಇದ್ದಾರೆ. ಇದರಿಂದ ಕೃಷಿ ಮಾಡಲು ತೊಂದರೆಯಾಗುತ್ತಿದೆ’ ಎಂದು ಗಿರಿಧರ ಅಳಲು ತೋಡಿಕೊಂಡರು.
ಪ್ರತಿಕ್ರಿಯೆ ಪಡೆಯಲು ನಗರಸಭೆ ಪೌರಾಯುಕ್ತರು ಸಂಪರ್ಕಕ್ಕೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.