
ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಡೆಯಲಿರುವ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉತ್ಸವ ಸಮಿತಿ ಪ್ರಮುಖರು ಕಾರವಾರದಲ್ಲಿ ಪ್ರದರ್ಶಿಸಿದರು
ಕಾರವಾರ: ‘ಗೋವಾದ ಕಾಣಕೋಣದ ಸಮೀಪದಲ್ಲಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸ್ಥಾಪನೆಯಾಗಿ 550 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಾರ್ಧ ಪಂಚ ಶತಮಾನೋತ್ಸವ ಕಾರ್ಯಕ್ರಮ ನ.27ರಿಂದ 11 ದಿನಗಳ ಕಾಲ ನಡೆಯಲಿದೆ. 28ರಂದು ದೇಶದಲ್ಲೇ ಅತಿ ಎತ್ತರದ ರಾಮನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಗೊಳಿಸಲಿದ್ದಾರೆ’ ಎಂದು ಉತ್ಸವ ಸಮಿತಿ ಸಂಚಾಲಕ ಪ್ರದೀಪ್ ಪೈ ಹೇಳಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹೋತ್ಸವದ ಆಕರ್ಷಣೆಯಾಗಿ 77 ಅಡಿ ಎತ್ತರದ ಕಂಚಿನ ರಾಮನ ಪ್ರತಿಮೆ ಮತ್ತು ರಾಮಾಯಣ ಆಧಾರಿತ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಿಸಿದ ನೊಯ್ಡಾದ ರಾಮ್‌ಸುತಾರ ಅವರು ಈ ಪ್ರತಿಮೆ ನಿರ್ಮಿಸಿದ್ದು, ಅಂದಾಜು ₹16 ಕೋಟಿ ವೆಚ್ಚವಾಗಿದೆ’ ಎಂದು ತಿಳಿಸಿದರು.
‘ಪ್ರಧಾನಿ ಮೋದಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಕ್ಕೆ 16 ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಂದು ಮಧ್ಯಾಹ್ನ 3.30ರಿಂದ 5 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಉತ್ಸವ ನಡೆಯಲಿರುವ 11 ದಿನಗಳ ಕಾಲ ಮಠಕ್ಕೆ ಕನಿಷ್ಠ 1.25ರಿಂದ 2 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದರು.
‘ಎರಡು ವರ್ಷಗಳಿಂದ ಪ್ರತಿಮೆ ನಿರ್ಮಾಣ ಕೆಲಸ ನಡೆದಿದೆ. ಜೊತೆಗೆ 1 ಲಕ್ಷ ಚದರ ಅಡಿ ಪ್ರದೇಶದಲ್ಲಿ ಗುರುಕುಲ ವಿದ್ಯಾಪೀಠ ನಿರ್ಮಾಣ ಮಾಡಲಾಗಿದೆ. ರಾಮಾಯಣ ಕಥೆ ಆಧಾರಿತ ಥೀಮ್ ಪಾರ್ಕ್, 3ಡಿ ಪ್ರೊಜೆಕ್ಷನ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ’ ಎಂದು ಹೇಳಿದರು.
‘ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಮಠದ ಜೀವೋತ್ತಮ ಸಭಾಮಂಟಪದಲ್ಲಿ 27ರ ಸಂಜೆ 4.30ಕ್ಕೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಪ್ರತಿನಿತ್ಯ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ನ.30ರಂದು ಖ್ಯಾತ ಗಾಯಕ ಶಂಕರ್ ಮಹಾದೇವನ್, ಡಿ.6ರಂದು ಮೈಥಿಲಿ ಠಾಕೂರ್, 7ರಂದು ಮಹೇಶ್ ಕಾಳೆ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ದೇಶದ ಖ್ಯಾತನಾಮ ಕಲಾವಿದರು ನಿತ್ಯ ಭಜನೆ, ಭಕ್ತಿಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು’ ಎಂದರು.
ಜಂಟಿ ಕಾರ್ಯದರ್ಶಿ ಅಣ್ಣಪ್ಪ ಕಾಮತ್, ಖಜಾಂಚಿ ಯೋಗೇಶ ಕಾಮತ್, ಪಿಆರ್‌ಒ ಮುಕುಂದ ಕಾಮತ್, ಸಂಜಯ ಪ್ರಭು, ಮಾಧವ ಭಟ್, ರಾಜೇಶ ನಾಯಕ ಇದ್ದರು.
ಸಮಾಜ ಸೇವೆಗೂ ಆದ್ಯತೆ
‘ಸಾರ್ಧ ಪಂಚಶತಮಾನೋತ್ಸವದ ಭಾಗವಾಗಿ ಸ್ವಚ್ಛ ಪರ್ತಗಾಳಿ ಕಾರ್ಯಕ್ರಮದ ಮೂಲಕ ಸ್ವಚ್ಛತೆ ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಲು ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ನಿರ್ಧರಿಸಿದ್ದಾರೆ. ಜೊತೆಗೆ ಯೋಗ ಆರೋಗ್ಯ ದಿನ ಆಚರಿಸಲು ನಿರ್ಧರಿಸಿದ್ದು ಮೂರು ದಿನಗಳ ಕಾಲ ಯೋಗ ಆರೋಗ್ಯ ನಡೆಯಲಿದೆ. ಡಿ.7ರಂದು ಮಣಿಪಾಲ ಆಸ್ಪತ್ರೆ ಸಹಯೋಗದೊಂದಿಗೆ ಆರೋಗ್ಯ ಶಿಬಿರ ರಕ್ತದಾನ ಶಿಬಿರ ನಡೆಯಲಿದೆ. ದಕ್ಷಿಣ ಗೋವಾದಲ್ಲಿ ಆಧ್ಯಾತ್ಮ ಪ್ರವಾಸೋದ್ಯಮ ಬೆಳೆಸಲು ಸ್ವಾಮೀಜಿ ಸಂಕಲ್ಪಿಸಿದ್ದಾರೆ’ ಎಂದು ಉತ್ಸವ ಸಮಿತಿ ಜಂಟಿ ಕಾರ್ಯದರ್ಶಿ ಅಣ್ಣಪ್ಪ ಕಾಮತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.