ADVERTISEMENT

ಸಿನಿಮೀಯ ಮಾದರಿ ಕಾರ್ಯಾಚರಣೆ: ತಪ್ಪಿಕೊಳ್ಳಲು ಯತ್ನಸಿದ ಆರೋಪಿ ಬಂಧನ

ತಾಯಿ ಮೇಲೆ ಹಲ್ಲೆ ಮಾಡಿದ್ದ ಆರೋಪ: ಪೊಲೀಸರಿಂದ

​ಪ್ರಜಾವಾಣಿ ವಾರ್ತೆ
Published 26 ಮೇ 2021, 16:03 IST
Last Updated 26 ಮೇ 2021, 16:03 IST
ಆರೋಪಿ ಸಂದೀಪ ಗಾಂವ್ಕರ್ ಕಾರು ಕಾಂಪೌಂಡ್‌ಗೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿರುವುದು
ಆರೋಪಿ ಸಂದೀಪ ಗಾಂವ್ಕರ್ ಕಾರು ಕಾಂಪೌಂಡ್‌ಗೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿರುವುದು   

ಕಾರವಾರ: ಬಂಧಿಸಲು ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯೊಬ್ಬನನ್ನು ನಗರದಲ್ಲಿ ಪೊಲೀಸರು ಬುಧವಾರ ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ.

ತಾಲ್ಲೂಕಿನ ಸಿದ್ದರ ಗ್ರಾಮದ ಸಂದೀಪ ಗಾಂವ್ಕರ್ (40) ಬಂಧಿತ ಆರೋಪಿ. ತನ್ನ ತಾಯಿಗೆ ಹಲ್ಲೆ ಮಾಡಿದ್ದಾಗಿ ಆತನ ವಿರುದ್ಧ ಗ್ರಾಮೀಣ ಠಾಣೆಗೆ ದೂರು ಬಂದಿತ್ತು. ಈ ಬಗ್ಗೆ ವಿಚಾರಿಸಲು ಇನ್‌ಸ್ಪೆಕ್ಟರ್ ರೇವಣಸಿದ್ದಪ್ಪ ಅವರ ನೇತೃತ್ವದಲ್ಲಿ ಪೊಲೀಸರು ತೆರಳಿದ್ದರು. ಆತನ ವಿರುದ್ಧ ಕಾರು ಕಳವು ಪ್ರಕರಣವೂ ಇರುವ ಕಾರಣ ಬಂಧಿಸಲು ಮುಂದಾಗಿದ್ದರು.

ಮದ್ಯ ಸೇವಿಸಿದ್ದ ಆತ, ತನ್ನ ಕಾರಿನಲ್ಲಿ ಅಲ್ಲಿಂದ ಪರಾರಿಯಾದ. ಅವನನ್ನು ಪೊಲೀಸರು ಬೆನ್ನತ್ತಿದ್ದಂತೆ ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿಕೊಂಡು ಸಾಗಿದ. ಎದುರಿಗೆ ಸಿಕ್ಕಿದ ವಾಹನಗಳು, ಕಾಂಪೌಂಡ್‌ಗೂ ಕಾರನ್ನು ಡಿಕ್ಕಿ ಹೊಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಈ ವಿಚಾರ ಗೊತ್ತಾಗಿ ನಗರ ಠಾಣೆ ಇನ್‌ಸ್ಪೆಕ್ಟರ್ ಸಂತೋಷಕುಮಾರ್, ಹಬ್ಬುವಾಡ ರಸ್ತೆಯ ಗೀತಾಂಜಲಿ ಟಾಕೀಸ್ ಬಳಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ತಡೆಯಲು ಮುಂದಾದರು.

ADVERTISEMENT

ಆದರೆ, ಕಾರು ನಿಲ್ಲಿಸದ ಆರೋಪಿಯು ತಪ್ಪಿಸಿಕೊಂಡು ಕೋಡಿಬಾಗದ ಖಾಪ್ರಿ ದೇವಸ್ಥಾನದತ್ತ ಸಾಗಿದ. ‍ಪೊಲೀಸರು ಪುನಃ ಆತನನ್ನು ಹಿಂಬಾಲಿಸಿದರು. ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ತನ್ನ ಕಾರನ್ನು ದೇವಸ್ಥಾನದ ಹಿಂಬದಿಯ ಮನೆಯೊಂದರ ಕಾಂಪೌಂಡ್ ಗೋಡೆಗೆ ಗುದ್ದಿದ. ಅಲ್ಲಿ ಸಿಕ್ಕಿಬಿದ್ದ ಆರೋಪಿಗೆ ಪೊಲೀಸರು ಹೆಡೆಮುರಿ ಕಟ್ಟಿದರು.

ನಗರದ ಬ್ರಾಹ್ಮಣ ಗಲ್ಲಿಯ ವಕೀಲ ವಿವೇಕ ಪ್ರಭು ಅವರ ಕಾರು ಚಾಲಕನಾಗಿ 2019ರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು, ಅವರ ಕಾರನ್ನೇ ಕಳವು ಮಾಡಿದ್ದ. ಬಳಿಕ ಕಾರನ್ನು ಬಿಟ್ಟು ಪರಾರಿಯಾಗಿದ್ದ ಆತನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸರ ಕಾರ್ಯಾಚರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.