
ದಾಂಡೇಲಿ: ‘ಹಿಂದೂ ಧರ್ಮದ ಪರವಾಗಿ ವಾದ ಮಂಡಿಸುವ ಸಂಘಟನೆಗಳನ್ನು, ನಾಯಕರನ್ನು ಮತ್ತು ಜನರನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ನಿಷೇಧ ಕಾಯ್ದೆ ಜಾರಿ ಮಾಡಿದ್ದು, ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಧರ್ಮದ ಪರವಾಗಿ ಮಾತನಾಡುವುದು ತಪ್ಪಾಗಿದೆ. ಮತಾಂತರ, ಲವ್ ಜಿಹಾದ್ ವಿರುದ್ಧ ಮಾತನಾಡುವುದು ತಪ್ಪಾ ಎಂದು ಪ್ರಶ್ನಿಸಿದರು. ಅಂಬೇಡ್ಕರ್ ಅವರು ಸಂವಿಧಾನ ಬದ್ಧವಾಗಿ ಮಾತನಾಡುವ ಹಕ್ಕು ನೀಡಿದ್ದಾರೆ’ ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಭುಗಿಲೆದ್ದಿದ್ದು ಎಲ್ಲ ದೇವರು ಸಮಾನರು ಎಂದು ಹೇಳಿದ ಕಾರಣಕ್ಕೆ ದೀಪು ಎನ್ನುವ ಹಿಂದೂ ಯುವಕನನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಇಂತಹ ಹಿಂಸೆ ತಡೆಗಟ್ಟಲು ಮತ್ತು ಹಿಂದೂಗಳ ರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಕಿಸ್ಮಸ್ ಆಚರಣೆಗೆ ಒಂದು ದಿನ ಮಾತ್ರ ರಜೆ ನೀಡಬೇಕು, ಅದರ ಬದಲಾಗಿ 10 ದಿನ ನೀಡಿದ್ದಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಶ್ರೀರಾಮ ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶ್ರೀರಾಮ ಸೇನೆ ಉತ್ತರ ಪ್ರಾಂತದ ಗೌರವಾಧ್ಯಕ್ಷ ಶ್ರೀ ಪ್ರಮೋದ ಆಚಾರ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ತಿನ ದಾಂಡೇಲಿ ಘಟಕದ ಅಧ್ಯಕ್ಷ ಶ್ರೀನಾಥ್ ಪಾಸಲಕರ, ವಾಸುದೇವ್ ಪ್ರಭು, ಶಿವಾನಂದ ಗಗ್ಗರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.