
ಸಿಂದಗಿ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜು ಆವರಣದಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಬೆಂಗಳೂರು,
ಸಿಂದಗಿ: ಪಟ್ಟಣದ ಎಚ್.ಜಿ.ಪಿಯು ಕಾಲೇಜು ಆವರಣದಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಬೆಂಗಳೂರು, ವಿಜಯಪುರ ವತಿಯಿಂದ ಜರುಗಿದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ/ಬಾಲಕಿಯರ ಕುಸ್ತಿ ಟೂರ್ನಿ ಶನಿವಾರ ಸಂಪನ್ನಗೊಂಡಿತು.
ವಿಜಯಪುರ ಜಿಲ್ಲೆ 15 ಪಾಯಿಂಟ್ ಗಳಿಂದ ಬಾಲಕರ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಉಳಿಸಿಕೊಂಡತು.
ಉತ್ತರಕನ್ನಡ ಜಿಲ್ಲೆ 37 ಪಾಯಿಂಟ್ ಗಳಿಂದ ಬಾಲಕಿಯರ ಫ್ರೀಸ್ಟೈಲ್ ಕುಸ್ತಿಯಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬಾಲಕರ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 11 ಪಾಯಿಂಟ್ ಗಳನ್ನು ಪಡೆದುಕೊಂಡು ದ್ವಿತೀಯ ಪ್ರಶಸ್ತಿ ಪಡೆಯಿತು.
ಬಾಲಕಿಯರ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಬೆಳಗಾವಿ ಜಿಲ್ಲೆ 18 ಪಾಯಿಂಟ್ ಗಳಿಂದ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು.
ಗ್ರೀಕೊರೋಮನ್ ಕುಸ್ತಿಯಲ್ಲಿ ಬಾಗಲಕೋಟೆ ಜಿಲ್ಲೆ 19 ಪಾಯಿಂಟ್ ಗಳಿಂದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗಳಿಸಿತು. ದಾವಣಗೆರೆ ಜಿಲ್ಲೆ 14 ಪಾಯಿಂಟ್ ಗಳಿಂದ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ಟೂರ್ನಿಯಲ್ಲಿ 27 ಜಿಲ್ಲೆಯ 415 ಬಾಲಕರು, 25 ಜಿಲ್ಲೆಗಳಿಂದ 250 ಬಾಲಕಿಯರು ಭಾಗವಹಿಸಿದ್ದರು.
ಟೂರ್ನಿ ಪಾರಿತೋಷಕ ವಿತರಣಾ ಸಮಾರಂಭ: ಆಧುನಿಕ ಭಗೀರಥ ದಿವಂಗತ ಎಂ.ಸಿ.ಮನಗೂಳಿ ವೇದಿಕೆಯಲ್ಲಿ ಏರ್ಪಡಿಸಿದ್ದ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಕುಸ್ತಿಪಟುಗಳಿಗೆ ಪ್ರಶಸ್ತಿ ಪತ್ರ, ಟ್ರೋಫಿ ವಿತರಣೆ ಮಾಡಲಾಯಿತು.
ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಹಿರಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆ ಉಪನಿರ್ದೇಶಕ ಸಿ.ಕೆ.ಹೊಸಮನಿ ಮಾತನಾಡಿ, ಸಿಂದಗಿಯಲ್ಲಿ ರಾಜ್ಯಮಟ್ಟದ ಕುಸ್ತಿ ಟೂರ್ನಿ ಯಶಸ್ವಿಗೊಂಡಿತು. ಮೂರು ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು ಎಂದು ಸಂತಸ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಇದೇ ಕಾಲೇಜು ಆವರಣದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿ ಆಯೋಜಿಸುವ ಉತ್ಸುಕತೆ ಹೊಂದಿರುವುದಾಗಿ ಪ್ರಕಟಿಸಿದರು.
ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಪ್ರಾಧ್ಯಾಪಕರ ಸಂಘದ ಗೌರವಾಧ್ಯಕ್ಷ ಪ್ರೊ.ರವಿ ಗೋಲಾ ಟೂರ್ನಿ ಯಶಸ್ಸಿಗೆ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಸಕ್ರೀಯ ಭಾಗವಹಿಸುವಿಕೆ ಪ್ರಮುಖ ಕಾರಣವಾಗಿದೆ ಎಂದು ಮಾತನಾಡಿದರು.
ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕ ಬಿ.ಜಿ.ನೆಲ್ಲಗಿ ವಕೀಲ ಅಭಿನಂದನಾಪರ ಮಾತುಗಳನ್ನಾಡಿದರು.
ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ವಿಜಯಪುರ ಜಿಲ್ಲಾ ಪಿಯು ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಶಾಂತೇಶ ದುರ್ಗಿ, ಕೆ.ಎಚ್.ಸೋಮಾಪುರ, ಎಚ್.ಎಂ.ಉತ್ನಾಳ, ಉಪನ್ಯಾಸಕರಾದ ಸಿದ್ಧಲಿಂಗ ಕಿಣಗಿ, ಅಂಬರೀಶ ಬಿರಾದಾರ, ಗವಿಸಿದ್ದಪ್ಪ ವೇದಿಕೆಯಲ್ಲಿದ್ದರು.
ಜಿಲ್ಲೆಯ ಪಿಯು ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಣ ಉಪನ್ಯಾಸಕರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.