ADVERTISEMENT

ಚರಂಡಿ ಮುಚ್ಚಳ ತೆರವು: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 15:48 IST
Last Updated 23 ಜುಲೈ 2021, 15:48 IST
ಶಿರಸಿ–ಹುಬ್ಬಳ್ಳಿ ರಸ್ತೆಯಲ್ಲಿ ಚರಂಡಿ ಮುಚ್ಚಳ ಒಡೆದು ರಸ್ತೆ ಪಕ್ಕ ಹಾಕಿರುವುದು
ಶಿರಸಿ–ಹುಬ್ಬಳ್ಳಿ ರಸ್ತೆಯಲ್ಲಿ ಚರಂಡಿ ಮುಚ್ಚಳ ಒಡೆದು ರಸ್ತೆ ಪಕ್ಕ ಹಾಕಿರುವುದು   

ಶಿರಸಿ: ಮಳೆನೀರು ಸರಾಗವಾಗಿ ಹರಿದು ಹೋಗುವ ನೆಪದಲ್ಲಿ ನಗರದ ವಿವಿಧೆಡೆ ನಗರಸಭೆ ಸಿಬ್ಬಂದಿ ಚರಂಡಿಯ ಕಾಂಕ್ರೀಟ್ ಮುಚ್ಚಳ ಒಡೆದು ಹಾಕಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಗುರುವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ನಗರದ ಹಲವು ಪ್ರದೇಶ ಜಲಾವೃತಗೊಂಡಿವೆ. ಪ್ರಗತಿ ನಗರ, ಸಮೃದ್ಧಿ ನಗರ, ಅಯ್ಯಪ್ಪ ನಗರ, ಲಯನ್ಸ್ ನಗರ ಸೇರಿ ಹಲವೆಡೆ ತಗ್ಗು ಪ್ರದೇಶಗಳಲ್ಲಿ ಸಮಸ್ಯೆ ಎದುರಾಗಿದ್ದವು.

ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲೂ ನೀರು ತುಂಬಿಕೊಂಡಿದ್ದರಿಂದ ತಾತ್ಕಾಲಿಕ ಪರಿಹಾರಕ್ಕೆ ಸಿಬ್ಬಂದಿ ಚರಂಡಿಗಳ ಮೇಲೆ ಮುಚ್ಚಲ್ಪಟ್ಟಿದ್ದ ಕಾಂಕ್ರೀಟ್ ಮುಚ್ಚಳಗಳನ್ನು ತೆರವುಗೊಳಿಸಿದರು. ಕೆಲವು ಕಡೆ ಒಡೆದು ಹಾಕಲಾಗಿತ್ತು.

ADVERTISEMENT

‘ಮಳೆಗಾಲಕ್ಕೆ ಮುನ್ನ ಮುನ್ನೆಚ್ಚರಿಕೆ ವಹಿಸುವಲ್ಲಿ ನಗರಸಭೆ ಎಡವಿದೆ. ಈಗ ಏಕಾಏಕಿ ಸಮಸ್ಯೆ ತಪ್ಪಿಸಲು ಅವೈಜ್ಞಾನಿಕ ರೀತಿಯ ಕ್ರಮ ಅನುಸರಿಸಲಾಗಿದೆ. ಹಲವೆಡೆ ಚರಂಡಿಗೆ ಮುಚ್ಚಿಗೆಯಿಲ್ಲದೆ ಜನರು ಎಡವಿ ಬೀಳುವ ಅಪಾಯವಿದೆ. ಪುನಃ ಅಳವಡಿಕೆಗೆ ಲಕ್ಷಾಂತರ ವೆಚ್ಚವಾಗಲಿದ್ದು ತೆರಿಗೆ ಹಣ ಅನಗತ್ಯ ಪೋಲಾಗಲಿದೆ’ ಎಂದು ಹಲವು ಅಂಗಡಿಕಾರರು, ಸಾರ್ವಜನಿಕರು ಆರೋಪಿಸಿದ್ದಾರೆ.

‘ನೀರು ನಿಲ್ಲುವುದನ್ನು ತಪ್ಪಿಸಲು ತುರ್ತು ಕ್ರಮ ಅನಿವಾರ್ಯ. ಅವಘಡ ತಪ್ಪಿಸಲು ಮೊದಲು ಆದ್ಯತೆ ನೀಡುವುದಕ್ಕೆ ಗಮನ ಹರಿಸಲಾಗಿದೆ. ಉದ್ದೇಶಪೂರ್ವಕವಾಗಿ ಚರಂಡಿ ಮುಚ್ಚಳ ಒಡೆದು ಹಾಕುವ ಕೆಲಸ ನಡೆದಿಲ್ಲ’ ಎಂದು ನಗರಸಭೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.