ADVERTISEMENT

ಆಡಳಿತ ಯಂತ್ರ ಸತ್ತು ಹೋಗಿದೆಯೆ: ಆರ್.ವಿ.ದೇಶಪಾಂಡೆ

ಶಾಸಕ ಆರ್.ವಿ.ದೇಶಪಾಂಡೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 12:11 IST
Last Updated 27 ಸೆಪ್ಟೆಂಬರ್ 2022, 12:11 IST
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ   

ಶಿರಸಿ: ‘ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ, ಮೂಲಸೌಕರ್ಯಗಳ ಕೊರತೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುಂಠಿತತೆ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಬಾಧಿಸುತ್ತಿದೆ. ಆಡಳಿತ ಯಂತ್ರ ಸಂಪೂರ್ಣ ಸತ್ತು ಹೋಗಿದೆಯೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ’ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಪ್ರಶ್ನಿಸಿದರು.

‘ಕೋಮುವಾದ, ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಸಮಸ್ಯೆಗಳ ಸುಳಿಯಲ್ಲಿ ತತ್ತರಿಸಿರುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಕಾಂಗ್ರೆಸ್ ಕೈಗೊಂಡಿರುವ ಭಾರತ್ ಜೋಡೊ ಪಾದಯಾತ್ರೆ ನೆರವಾಗಲಿದೆ‌’ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

‘ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಪಕ್ಷಾತೀತ ಹೋರಾಟ ನಡೆದಿದೆ. ಯೋಜನೆ ಜಾರಿಗೆ ಬಂದರೆ ಉತ್ತ ಕರ್ನಾಟಕ ಅಭಿವೃದ್ಧಿಗೆ ಅನುಕೂಲವಾಗಲಿದೆ. ಪ್ರವಾಸೋದ್ಯಮ, ವ್ಯಾಪಾರ ಅಭಿವೃದ್ಧಿಗೆ ದಾರಿಯಾಗಲಿದೆ. ರೈಲ್ವೆ ಯೋಜನೆಯಿಂದ ಪರಿಸರ ಮಾಲಿನ್ಯ ತಡೆಯಲು ದಾರಿಯಾಗಲಿದ್ದು ಇವೆಲ್ಲ ಅಂಶಗಳನ್ನು ಪ್ರಧಾನಿ, ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ರಸ್ತೆಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಪಡಿತರ ಸಮರ್ಪಕ ವಿತರಣೆಯಾಗುತ್ತಿಲ್ಲ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಸೂಕ್ತ ಗಮನಹರಿಸುತ್ತಿಲ್ಲ.‌ ಇವೆಲ್ಲವೂ ನಿಷ್ಕ್ರೀಯತೆಯ ಪರಮಾವಧಿಯಾಗಿದೆ. ಸರ್ಕಾರ ಬಡವರ ಜೀವನದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜ್ ಸ್ಥಾಪಿಸಲಾಗಿದೆ. ರಸ್ತೆ, ಆಸ್ಪತ್ರೆ ಸುಧಾರಣೆ, ಹಳ್ಳಿಗಳ ಅಭಿವೃದ್ಧಿಯಾಗಿದೆ. ಇವೆಲ್ಲವೂ ನಾನು ಸಚಿವನಾಗಿದ್ದ ಅವಧಿಯಲ್ಲೇ ಆಗಿದ್ದು. ನಾನೇ ಮಾಡಿದ್ದು ಎಂದು ಎಂದೂ ಹೇಳಿಕೊಂಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ಜಗದೀಶ ಗೌಡ, ಇತರರು ಇದ್ದರು.

ಜಿಲ್ಲೆಗೆ ದೇಶಪಾಂಡೆ ಏನು ಮಾಡಿದ್ದಾರೆ ಎಂದು ಟೀಕಿಸುವವರು ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸ ಅರ್ಥ ಮಾಡಿಕೊಂಡರೆ ಸಾಕು.

- ಆರ್.ವಿ.ದೇಶಪಾಂಡೆ, ಹಳಿಯಾಳ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.