ADVERTISEMENT

ಪ್ರಾಯೋಗಿಕ ಮಳೆ ಕೇಂದ್ರ ಸ್ಥಾಪನೆ ಭರವಸೆ

ಕಳವೆಯ ಕಾನ್ಮನೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 14:25 IST
Last Updated 4 ಏಪ್ರಿಲ್ 2022, 14:25 IST
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿರಸಿ ತಾಲ್ಲೂಕಿನ ಕಳವೆಯ ಕಾನ್ಮನೆಯಲ್ಲಿ ನೂತನವಾಗಿ ನಿರ್ಮಿಸಿದ ವನರಂಗ ರಂಗಮಂದಿರ ಉದ್ಘಾಟಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿರಸಿ ತಾಲ್ಲೂಕಿನ ಕಳವೆಯ ಕಾನ್ಮನೆಯಲ್ಲಿ ನೂತನವಾಗಿ ನಿರ್ಮಿಸಿದ ವನರಂಗ ರಂಗಮಂದಿರ ಉದ್ಘಾಟಿಸಿದರು.   

ಶಿರಸಿ: ಮಳೆ ನೀರು ಸಂರಕ್ಷಣೆ, ಮರುಬಳಕೆ ಕೇಂದ್ರವನ್ನು ರಾಜ್ಯವ್ಯಾಪಿ ಸ್ಥಾಪಿಸುವ ಯೋಜನೆ ರೂಪಿಸಲಾಗುವುದು. ಪ್ರಾಯೋಗಿಕವಾಗಿ ಶಿರಸಿಯಲ್ಲೇ ಮೊದಲು ಸ್ಥಾಪನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಕಳವೆ ಗ್ರಾಮ ಅರಣ್ಯ ಸಮಿತಿ ವತಿಯಿಂದ ಅಭಿವೃದ್ಧಿಪಡಿಸಲಾದ ಕೆರೆಯನ್ನು ಸೋಮವಾರ ವೀಕ್ಷಿಸಿ,‌ ಕಾನ್ಮನೆಯ ವನರಂಗ ಸಭಾಭವನ ಉದ್ಘಾಟಿಸಿದ ಅವರು, ‘ನೀರು ಇಂಗಿಸಿ ಅಂತರ್ಜಲ ಹೆಚ್ಚಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ. ಜಲಧಾರೆ ಯೋಜನೆಯಲ್ಲಿ 2.42 ಲಕ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜಲತಜ್ಞ ಶಿವಾನಂದ ಕಳವೆ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ’ ಎಂದರು.

ಕಳವೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರೂ ಆಗಿರುವ ಕಾನ್ಮನೆ ಕೇಂದ್ರ ಸ್ಥಾಪಕ ಶಿವಾನಂದ ಕಳವೆ ಮಾತನಾಡಿ, ‘ಕಾಡನ್ನು ಬೆಳೆಸುವ, ಸಂರಕ್ಷಿಸುವ ಪ್ರಾಯೋಗಿಕ ಪಾಠವನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ’ ಎಂದರು.

ADVERTISEMENT

ಕಾನ್ಮನೆ ಮತ್ತು ಸುತ್ತಮುತ್ತ ಮಳೆ ನೀರು ಸಂಗ್ರಹ, ಸಂರಕ್ಷಣೆ ಕೇಂದ್ರ ಸ್ಥಾಪನೆಗೆ ಅನುದಾನ ನೀಡುವಂತೆ ಮನವಿ ಮಾಡಿದ್ದರು.

ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಯರಾಮ್, ಹುಣಸೆಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ ಗೌಡರ್, ಡಿಸಿಎಫ್ ಎಸ್.ಜಿ.ಹೆಗಡೆ, ಇತರರು ಇದ್ದರು.

ಗ್ರಾ.ಪಂ.ಸದಸ್ಯರಿಗೆ ಕೆರೆ ಸಂರಕ್ಷಣೆ ತರಬೇತಿ:

ಶಿರಸಿ: ‘ಮುಂದಿನ ಒಂದು ವರ್ಷದೊಳಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಕೆರೆ ಸಂರಕ್ಷಣೆ ಕುರಿತು ಇಲಾಖೆಯಿಂದ ತರಬೇತಿ ನೀಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

‘ಜಲಧಾರೆ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರಾಜ್ಯವ್ಯಾಪಿ ಜಿಲ್ಲಾ ಪಂಚಾಯ್ತಿ ಅಧೀನದಲ್ಲಿರುವ ಕೆರೆಗಳ ಪೈಕಿ ಸುಮಾರು 28 ಸಾವಿರ ಕೆರೆಗಳನ್ನು ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಲಾಗಿದೆ. ಸದಸ್ಯರಿಗೆ ಜಾಗೃತಿ ಮೂಡಿದರೆ ನೈಸರ್ಗಿಕ ಜಲಪಾತ್ರೆ ಅಭಿವೃದ್ಧಿ ಪರಿಣಾಮಕಾರಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.