ಹುಬ್ಬಳ್ಳಿ: ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಉತ್ತಮವಾಗಿದ್ದು, ರೈತಾಪಿ ವರ್ಗ ಸಂಭ್ರಮದಲ್ಲಿದೆ. ಆದರೆ ಈ ಮಳೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಪ್ರತಿ ವರ್ಷದಂತೆ ನಷ್ಟ ಉಂಟುಮಾಡಿದೆ.
ಈ ವರ್ಷ ಮೇ ಹಾಗೂ ಜೂನ್ ತಿಂಗಳುಗಳಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಸುರಿದಿದ್ದು, ಗಾಳಿ ಕೂಡ ಜೋರಾಗಿಯೇ ಬೀಸಿದೆ. ಇದೆಲ್ಲದರ ಪರಿಣಾಮವಾಗಿ ಜೂನ್ 20ರ ವರೆಗೆ ಹೆಸ್ಕಾಂಗೆ ಒಟ್ಟು ₹6.07 ಕೋಟಿಯಷ್ಟು ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಗಾಳಿಯ ಹೊಡೆತಕ್ಕೆ ಮರ, ಕೊಂಬೆಗಳು ಬಿದ್ದು ಹೆಸ್ಕಾಂ ವ್ಯಾಪ್ತಿಯ ಏಳು ವಿಭಾಗಗಳಲ್ಲಿ ಒಟ್ಟು 4,601 ವಿದ್ಯುತ್ ಕಂಬಗಳು ಈವರೆಗೆ ಮುರಿದಿವೆ. ನಿರಂತರ ಮಳೆ, ಪ್ರವಾಹ ಹಾಗೂ ಸಿಡಿಲಿನ ಪರಿಣಾಮವಾಗಿ 214 ವಿದ್ಯುತ್ ಪರಿವರ್ತಕಗಳು ಕೆಟ್ಟಿವೆ.
ಉತ್ತರ ಕನ್ನಡ, ಧಾರವಾಡದಲ್ಲಿ ಹೆಚ್ಚು: ಬೇರೆ ವಿಭಾಗಗಳಿಗೆ ಹೋಲಿಸಿದರೆ, ಮಲೆನಾಡು ಪ್ರದೇಶವಾದ ಉತ್ತರ ಕನ್ನಡ ಹಾಗೂ ಅರೆ ಮಲೆನಾಡು ಭಾಗವಾದ ಧಾರವಾಡ ವಿಭಾಗಗಳಲ್ಲಿ ಹೆಸ್ಕಾಂ ಹೆಚ್ಚಿನ ಪ್ರಮಾಣದ ನಷ್ಟ ಅನುಭವಿಸಿದೆ. ಉತ್ತರ ಕನ್ನಡವೊಂದರಲ್ಲಿಯೇ 2,128 ಕಂಬ ಹಾಗೂ 142 ಪರಿವರ್ತಕಗಳಿಗೆ ಹಾನಿ ಉಂಟಾಗಿದ್ದರೆ, ಧಾರವಾಡದಲ್ಲಿ 613 ಕಂಬ ಹಾಗೂ 28 ಪರಿವರ್ತಕಗಳಿಗೆ ಹಾನಿ ಉಂಟಾಗಿದೆ.
ಉತ್ತರ ಕನ್ನಡ ವಿಭಾಗದಲ್ಲಿ 5 ಕಿ.ಮೀ. ಮತ್ತು ಬಾಗಲಕೋಟೆ ವಿಭಾಗದಲ್ಲಿ 6 ಕಿ.ಮೀ. ವಿದ್ಯುತ್ ತಂತಿಯನ್ನು ಬದಲಾಯಿಸಲಾಗಿದೆ. ಬೇರೆ ಯಾವುದೇ ವಿಭಾಗಗಳಲ್ಲಿ ತಂತಿ ಬದಲಾಯಿಸುವ ಅಗತ್ಯ ಉಂಟಾಗಿಲ್ಲ.
ಗದಗ ಜಿಲ್ಲೆಯಲ್ಲಿ ಯಾವುದೇ ಪರಿವರ್ತಕಕ್ಕೆ ಹಾನಿ ಉಂಟಾಗಿಲ್ಲ. ಅಲ್ಲದೆ ಅತಿ ಕಡಿಮೆ, ಅಂದರೆ 284 ಕಂಬಗಳಿಗಷ್ಟೇ ಹಾನಿ ಉಂಟಾಗಿದೆ.
‘ನಮ್ಮ ಭಾಗದಲ್ಲಿ ಮಳೆಗಾಲದಲ್ಲಿ ವಿದ್ಯುತ್ ತಂತಿ, ಕಂಬಗಳ ಮೇಲೆ ಮರ ಬೀಳುವುದು ಸಾಮಾನ್ಯ. ಒಮ್ಮೆ ದುರಸ್ತಿ ಮಾಡಿದಲ್ಲೇ ಮತ್ತೆ ಹಾನಿ ಉಂಟಾಗುತ್ತಲೇ ಇರುತ್ತದೆ. ಮಳೆಗಾಲ ಬಂತೆಂದರೆ ಹಳ್ಳಿಗರು ವಾರ, ಹದಿನೈದು ದಿನಗಳ ವರೆಗೆ ವಿದ್ಯುತ್ ಸಂಪರ್ಕ ಇಲ್ಲದೇ, ಹೊರ ಜಗತ್ತಿನ ಕೊಂಡಿ ಕಳಚಿದಂತೆ ಬದುಕುತ್ತೇವೆ. ಇದು ನಮಗೆ ಅಭ್ಯಾಸ ಆಗಿಬಿಟ್ಟಿದೆ. ಈಚೆಗೆ ಸೋಲಾರ್, ಯುಪಿಎಸ್ ಸೌಲಭ್ಯ ಅಳವಡಿಸಿಕೊಂಡ ಕಾರಣ ಮೊದಲಿನಷ್ಟು ಸಮಸ್ಯೆ ಇಲ್ಲ’ ಎಂದು ವಿದ್ಯುತ್ ಸಮಸ್ಯೆ ಬಗ್ಗೆ ತಿಳಿಸಿದರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹೆಗ್ಗಾರ ಗ್ರಾಮದ ನಾರಾಯಣ ಭಟ್ಟ.
1 ಅಂಕಿ ಅಂಶ ₹4,000– ₹5,000ಒಂದು ಕಂಬಕ್ಕೆ ತಗುಲುವ ವೆಚ್ಚ *** ₹2 ಲಕ್ಷದಿಂದ ₹ 2.5 ಲಕ್ಷಒಂದು ವಿದ್ಯುತ್ ಪರಿವರ್ತಕಕ್ಕೆ ತಗುಲುವ ವೆಚ್ಚ
ನಿತ್ಯ ಬೆಳಿಗ್ಗೆ ಹಾನಿ ಮಾಹಿತಿ ಪಡೆದು ಅವುಗಳ ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ. ಗ್ರಾಹಕರಿಗೆ ಸಮಸ್ಯೆ ಆಗದಂತೆ ನಮ್ಮ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆವೈಶಾಲಿ ಎಂ.ಎಲ್. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ
24 ಗಂಟೆ ಒಳಗೆ ದುರಸ್ತಿ ‘ನಗರ ಪ್ರದೇಶಗಳಲ್ಲಿ ಪರಿವರ್ತಕಕ್ಕೆ ಹಾನಿ ಉಂಟಾದರೆ 24 ಗಂಟೆ ಒಳಗಾಗಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 72 ಗಂಟೆಯ ಒಳಗಾಗಿ ಬದಲಾಯಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಅಥವಾ ರಾತ್ರಿ ವೇಳೆ ಕಂಬಕ್ಕೆ ಹಾನಿ ಆಗಿದ್ದರೆ ತಕ್ಷಣಕ್ಕೆ ದುರಸ್ತಿ ಮಾಡಲು ಕಷ್ಟವಾಗುತ್ತದೆ. ಇಲ್ಲವಾದರೆ ಸಾದ್ಯವಾದಷ್ಟು ಶೀಘ್ರ ಕಂಬ ಬದಲಾಯಿಸಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಕಂಬ ಹಾಗೂ ಪರಿವರ್ತಕಗಳನ್ನು ಹೆಚ್ಚುವರಿಯಾಗಿ ದಾಸ್ತಾನು ಇಟ್ಟುಕೊಳ್ಳಲಾಗುತ್ತದೆ’ ಎಂದು ಹೆಸ್ಕಾ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.