ADVERTISEMENT

ಜೀವ ವೈವಿಧ್ಯ ಸಂರಕ್ಷಕ ರೈತ: ಬೆಟ್ಟದಲ್ಲಿ 300ಕ್ಕೂ ಹೆಚ್ಚು ಬಗೆಯ ಸಸ್ಯಗಳ ಪೋಷಣೆ

ಗಣಪತಿ ಹೆಗಡೆ
Published 12 ಮೇ 2022, 19:30 IST
Last Updated 12 ಮೇ 2022, 19:30 IST
ಶಿರಸಿ ತಾಲ್ಲೂಕಿನ ಕಾನಗೋಡಿನ ರಮೇಶ ಹೆಗಡೆ ತಾವು ಬೆಳೆದ ವಿವಿಧ ಬಗೆಯ ದಾಲ್ಚಿನ್ನಿ ಗಿಡಗಳನ್ನು ತೋರಿಸಿದರು
ಶಿರಸಿ ತಾಲ್ಲೂಕಿನ ಕಾನಗೋಡಿನ ರಮೇಶ ಹೆಗಡೆ ತಾವು ಬೆಳೆದ ವಿವಿಧ ಬಗೆಯ ದಾಲ್ಚಿನ್ನಿ ಗಿಡಗಳನ್ನು ತೋರಿಸಿದರು   

ಶಿರಸಿ: ಕೃಷಿ ಎಂದರೆ ಬೆಳೆ ಬೆಳೆದು ಮಾರಾಟ ಮಾಡುವುದು ಎಂಬ ಕಲ್ಪನೆಗೆ ಸೀಮಿತರಾದ ರೈತರ ಸಂಖ್ಯೆಯೇ ಹೆಚ್ಚು. ಜೀವ ವೈವಿಧ್ಯ ಸಂರಕ್ಷಣೆ ಜತೆಗೆ ಬೇಸಾಯ ಮಾಡುವ ಕೆಲವು ರೈತರ ಸಾಲಿಗೆ ತಾಲ್ಲೂಕಿನ ಕಾನಗೋಡ ಗ್ರಾಮದ ರಮೇಶ ಹೆಗಡೆ ಸೇರಿದ್ದಾರೆ.

ಮನೆ ಸುತ್ತಲಿನ ಜಾಗ, ಅಂಗಳ, ಪಕ್ಕದಲ್ಲಿರುವ ಬೆಟ್ಟವನ್ನು ಕೃಷಿ ಚಟುವಟಿಕೆಗೆ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗೆ ಮೀಸಲಿಟ್ಟಿದ್ದಾರೆ. ಒಂದೂವರೆ ಎಕರೆ ಅಡಿಕೆ ತೋಟದಲ್ಲಿ ಅಡಿಕೆ ಜತೆಗೆ 15ಕ್ಕೂ ಹೆಚ್ಚು ಬಗೆಯ ಬೆಳೆ ಬೆಳೆಯುತ್ತಿದ್ದಾರೆ. ಏಲಕ್ಕಿ, ಕಾಳುಮೆಣಸು, ಕೋಕೋ, ಕಾಫಿ ಗಿಡಗಳು ಹಸಿರಾಗಿ ನಳನಳಿಸುತ್ತಿವೆ.

ಮನೆಗೆ ಹತ್ತಿರವಿರುವ ಆರು ಎಕರೆ ಬೆಟ್ಟ ಪ್ರದೇಶ ಜೀವ ವೈವಿಧ್ಯ ಸಂರಕ್ಷಣೆಯ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ 300ಕ್ಕೂ ಹೆಚ್ಚು ಬಗೆಯ ಸುಮಾರು 3 ಸಾವಿರ ಸಸಿಗಳನ್ನು ಬೆಳೆಸುತ್ತಿದ್ದಾರೆ. ಏಕನಾಯಕ, ಸುರಹೊನ್ನೆ, ಬಿಳಿಮತ್ತಿ, ಕಾಡುಹಿಪ್ಪೆ, ಕಣಗಿಲು, ರಕ್ತಚಂದನ, ಶ್ರೀಗಂಧ, ಸಿಮರೂಬಾ ಸೇರಿದಂತೆ ಅನೇಕ ಗಿಡಗಳಿವೆ.

ADVERTISEMENT

ಗದ್ದೆಯ ಪಕ್ಕದ ಅರ್ಧ ಎಕರೆಯಷ್ಟು ಜಾಗದಲ್ಲಿ ದೇಶದ ವಿವಿಧ ರಾಜ್ಯಗಳ 20ಕ್ಕೂ ಹೆಚ್ಚು ತಳಿಯ ದಾಲ್ಚಿನ್ನಿ ಬೆಳೆಯುತ್ತಿದ್ದಾರೆ. ಪಕ್ಕದಲ್ಲೇ ಮುರುಗಲು ಗಿಡಗಳು ಹಣ್ಣು ತುಂಬಿಕೊಂಡು ನಿಂತಿವೆ.

‘ಬಿ.ಕಾಂ. ಪದವೀಧರನಾಗಿದ್ದ ಕಾರಣಕ್ಕೆ ಎರಡು ವರ್ಷ ಗೋವಾದಲ್ಲಿ ಉದ್ಯೋಗದಲ್ಲಿದ್ದೆ. ಅನಿವಾರ್ಯ ಕಾರಣಕ್ಕೆ ಊರಿಗೆ ಮರಳಬೇಕಾಗಿ ಬಂತು. ಎರಡು ದಶಕದ ಹಿಂದೆ ಕೃಷಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಬಯಕೆ ಹುಟ್ಟಿತ್ತು’ ಎಂದು ಕೃಷಿ ಜೀವನದ ಆರಂಭವನ್ನು ರಮೇಶ ಹೆಗಡೆ ತಿಳಿಸಿದರು.

‘ಕೇವಲ ಗದ್ದೆ ಮಾತ್ರ ಹೊಂದಿದ್ದ ಜಾಗದಲ್ಲಿ ಅಡಿಕೆ ತೋಟ ರೂಪಿಸಿದೆ. ಅಡಿಕೆ ಮಾತ್ರ ನಂಬಿಕೊಳ್ಳುವ ಬದಲು ಉಳಿದ ಬೆಳೆಗಳತ್ತ ಚಿತ್ತ ಹರಿಸಿದೆ. ಮುರೂರಿನ ಕೃಷಿಕರೊಬ್ಬರಿಂದ ಸ್ಫೂರ್ತಿ ಪಡೆದು ಮನೆಯ ಸುತ್ತಮುತ್ತಲಿನ ಜಾಗದಲ್ಲೇ ಬಗೆಬಗೆಯ ಸಸ್ಯಗಳನ್ನು ಬೆಳೆಯಲು ಆರಂಭಿಸಿದೆ’ ಎಂದರು.

‘ಬೆಟ್ಟವನ್ನೂ ಸದ್ಬಳಕೆ ಮಾಡಿಕೊಳ್ಳುವ ಯೋಚನೆಯೊಂದಿಗೆ ಅಳಿವಿನ ಅಂಚಿನಲ್ಲಿರುವ ಸಸ್ಯಗಳನ್ನು ನಾಟಿ ಮಾಡಿದೆ. ಅಂತರ್ಜಲ ವೃದ್ಧಿಸುವ ಸಲುವಾಗಿ 180ಕ್ಕೂ ಹೆಚ್ಚು ಇಂಗುಗುಂಡಿ ನಿರ್ಮಿಸಿದೆ. ಸೀಮಿತ ನಿರ್ವಹಣೆಯಲ್ಲಿ ಗಿಡಗಳು ಚೆನ್ನಾಗಿ ಬೆಳೆಯುತ್ತಿವೆ’ ಎಂದು ವಿವರಿಸಿದರು.

ಪ್ರಯೋಗಕ್ಕೆ ಭೂಮಿ ಮೀಸಲು:ರಮೇಶ ಹೆಗಡೆ ತಮ್ಮ ಎರಡು ಎಕರೆ ಗದ್ದೆಯ ಪೈಕಿ ಒಂದು ಎಕರೆಯನ್ನು ಕೃಷಿ ವಿಜ್ಞಾನ ಕೇಂದ್ರಕ್ಕೆ ಭತ್ತ ಬೆಳೆ ಪ್ರಯೋಗಕ್ಕೆ ಮೀಸಲಿಟ್ಟಿದ್ದಾರೆ. ವಿಜ್ಞಾನಿಗಳ ಸಲಹೆಯೊಂದಿಗೆ ಇಲ್ಲಿ ಪ್ರತಿ ವರ್ಷ ವಿಭಿನ್ನ ತಳಿಯ ಭತ್ತ ಬೆಳೆಯಲಾಗುತ್ತಿದೆ.

ರಮೇಶ ಅವರ ಕೃಷಿ ಕಾರ್ಯಕ್ಕೆ ಪತ್ನಿ ರಾಧಾ ಹೆಗಡೆ ಜತೆಯಾಗಿದ್ದಾರೆ. ‘ಕೂಲಿಕಾರ್ಮಿಕರ ನೆರವಿಲ್ಲದೆ ಇಬ್ಬರೇ ಬಹುತೇಕ ಕೃಷಿ ಚಟುವಟಿಕೆ ನಿರ್ವಹಿಸುತ್ತಿದ್ದೇವೆ. ಪ್ರವಾಸಕ್ಕೆ ಹೋದ ಸ್ಥಳಗಳಿಂದ ಹೊಸಬಗೆಯ ಗಿಡ ತಂದು ಆರೈಕೆ ಮಾಡುವುದು ನಮ್ಮ ಹವ್ಯಾಸ’ ಎನ್ನುತ್ತಾರೆ ಈ ದಂಪತಿ.

ರೈತರು ಒಂದೇ ಬೆಳೆ ಅವಲಂಭಿಸುವ ಬದಲು ಅರಣ್ಯ ಉತ್ಪನ್ನಗಳನ್ನು ಒದಗಿಸುವ ಗಿಡಗಳು, ಬಹುಬೆಳೆ ಬೆಳೆಯುವ ಪದ್ಧತಿ ರೂಢಿಸಿಕೊಂಡರೆ ಲಾಭವಿದೆ. ನನಗೆ ಅದರ ಪ್ರಾಯೋಗಿಕ ಅನುಭವಾಗಿದೆ.

- ರಮೇಶ ಹೆಗಡೆ ಕಾನಗೋಡ, ಪ್ರಗತಿಪರ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.