ADVERTISEMENT

ಉತ್ತರ ಕನ್ನಡದಲ್ಲಿ 110 ರಾಮಪತ್ರೆ ಜಡ್ಡಿ ಕಾಡು: ಕಾಪಾಡಿಕೊಳ್ಳುವ ಅನಿವಾರ್ಯತೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 0:59 IST
Last Updated 16 ಜನವರಿ 2026, 0:59 IST
ಬೇಡ್ತಿ ಮತ್ತು ಅಘನಾಶಿನಿ ನದಿ ಕೊಳ್ಳ ಅಧ್ಯಯನ ತಂಡದ ಸದಸ್ಯರು ಗುರುತಿಸಿದ ರಾಮಪತ್ರೆ ಜಡ್ಡಿ ಕಾಡು 
ಬೇಡ್ತಿ ಮತ್ತು ಅಘನಾಶಿನಿ ನದಿ ಕೊಳ್ಳ ಅಧ್ಯಯನ ತಂಡದ ಸದಸ್ಯರು ಗುರುತಿಸಿದ ರಾಮಪತ್ರೆ ಜಡ್ಡಿ ಕಾಡು    

ಶಿರಸಿ: ಬೇಡ್ತಿ– ವರದಾ ನದಿ ತಿರುವು ಯೋಜನೆ ವಿಷಯವು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕೆಲ ವಿಜ್ಞಾನಿಗಳು ಪಶ್ಚಿಮ ಘಟ್ಟಗಳಲ್ಲಿ ಅಪರೂಪದ ಮರಗಳು ಮತ್ತು ಸಸ್ಯಗಳಿರುವುದನ್ನು ಪತ್ತೆ ಮಾಡಿದ್ದಾರೆ. ಅವುಗಳ ಮಹತ್ವ ಮತ್ತು ಸೂಕ್ಷ್ಮ ಸಂಗತಿಗಳ ಬಗ್ಗೆ ಅಧ್ಯಯನ ಮಾಡಿರುವ ಅವರು, ‘ಅಮೂಲ್ಯವಾದ ವೃಕ್ಷ ಪ್ರಭೇದಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಪ್ರತಿಪಾದಿಸಿದ್ದಾರೆ.

‘ಬೇಡ್ತಿ ಮತ್ತು ಅಘನಾಶಿನಿ ನದಿ ಕೊಳ್ಳಗಳಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಅಪರೂಪದ 39 ರಾಮಪತ್ರೆ ಜಡ್ಡಿ ಕಾಡುಗಳಿವೆ. ಅವು ನದಿಗಳಿಗೆ ಶಾಶ್ವತ ಜಲಮೂಲಗಳು. ಮಣ್ಣು ಸವಕಳಿ ತಡೆಗಟ್ಟುವಿಕೆ, ಪ್ರವಾಹ ನಿಯಂತ್ರಣ ಮತ್ತು ಅಂತರ್ಜಲ ಮರುಪೂರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ವಿಜ್ಞಾನಿ ಗಿರೀಶ ಪೂಜಾರ್ ತಿಳಿಸಿದ್ದಾರೆ.

2025ರ ಅಕ್ಟೋಬರ್ 25ರಿಂದ ಮೂರು ದಿನ ಪರಿಸರ ಕಾರ್ಯಕರ್ತ ನರಸಿಂಹ ಹೆಗಡೆ ವಾನಳ್ಳಿ ಮತ್ತು ತಂಡದ ಜೊತೆಗೆ ಬೇಡ್ತಿ ಮತ್ತು ಅಘನಾಶಿನಿ ನದಿ ಕೊಳ್ಳದಲ್ಲಿ ಅಧ್ಯಯನ ನಡೆಸಿದ ಬಳಿಕ ಈ ವಿಶಿಷ್ಟ ಕಾಡುಗಳ ಕುರಿತ ವಿಷಯವನ್ನು ದೃಢಪಡಿಸಿದ್ದಾರೆ.

ADVERTISEMENT

‘ವಿನಾಶದ ಅಂಚಿನಲ್ಲಿರುವ ದಾಸಪತ್ರೆ, ಘರ್ಜನ್, ಒಂದಂಕಿ, ಕೆಂಪು ನೇರಳೆ, ರಾಮಪತ್ರೆ ಸೇರಿ ಅಪರೂಪದ ವೃಕ್ಷ ಪ್ರಭೇದಗಳಿಗೆ ಕಾಡುಗಳು ಆಶ್ರಯತಾಣವಾಗಿದೆ. ಈ ಹಿಂದೆ ಹೊನ್ನಾವರದ ಸ್ನೇಹಕುಂಜ ಸಂಸ್ಥೆಯ ಅಧ್ಯಯನ ತಂಡವು ಈ ಕಾಡುಗಳನ್ನು ಗುರುತಿಸಿ ಪಾರಿಸಾರಿಕ ಪುನಶ್ಚೇತನ ಕಾರ್ಯವನ್ನು ಆರಂಭಿಸಿತ್ತು. ಸ್ಥಳೀಯ ಜನರು ಶತಮಾನಗಳಿಂದ ಹುಲಿ ದೇವರು, ಜಟಕ, ಅಮ್ಮನವರು ಮುಂತಾದ ದೇವರ ಕಾಡುಗಳ ರೂಪದಲ್ಲಿ ಇವುಗಳನ್ನು ರಕ್ಷಿಸಿಕೊಂಡು ಬಂದಿರುವುದು ವಿಶೇಷ’ ಎಂದು ತಿಳಿಸಿದ್ದಾರೆ.

‘ಈ ಪಾರಿಸಾರಿಕ ಸೇವೆಗೆ ಧನಸಹಾಯ ನೀಡುವ ಮೂಲಕ ಅಥವಾ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿಯಡಿ ಈ ಪ್ರದೇಶದ ಜನರಿಗೆ ಆರ್ಥಿಕ ನೆರವು ನೀಡಬೇಕು’ ಎಂದು ಅವರು ಕೋರಿದ್ದಾರೆ.

‘ರಾಮಪತ್ರೆಯ ಒಂದು ಎಕರೆ ಕಾಡು ಇದೆಯೆಂದರೆ ಸುತ್ತಮುತ್ತಲೂ ನೂರು ಎಕರೆ ಜಲಾನಯನ ಪ್ರದೇಶ, ನಿತ್ಯ ಹರಿದ್ವರ್ಣ ಕಾಡು ಇರಲೇಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ 110 ರಾಮಪತ್ರೆ ಜಡ್ಡಿ ಕಾಡು ಗುರುತಿಸಲಾಗಿದೆ. ಇಲ್ಲಿರುವ ಸಸ್ಯ ಪ್ರಬೇಧಗಳನ್ನು ಬೇರೆ ಕಾಡಿನಲ್ಲಿ ನೆಟ್ಟು ಬೆಳೆಸುವುದು ಅಸಾಧ್ಯ. ಬೇರೆ ವೃಕ್ಷ ಪ್ರಬೇಧಗಳನ್ನು ಇಲ್ಲಿ ನೆಟ್ಟು ಬೆಳೆಸಲು ಆಗದಂಥ ಸಂಕೀರ್ಣ ವ್ಯವಸ್ಥೆ ಇದೆ. ಇದು ಒಮ್ಮೆ ನಾಶವಾದರೆ ಯಾವುದೇ ಕಾರಣಕ್ಕೂ ಪುನರ್ ನಿರ್ಮಿಸಲು ಆಗುವುದಿಲ್ಲ. ಇಂಥ ಜಡ್ಡಿ ಕಾಡುಗಳ ರಕ್ಷಣೆ ಇಂದಿನ ತುರ್ತಾಗಿದೆ’ ಎಂದು ನರಸಿಂಹ ಹೆಗಡೆ ವಾನಳ್ಳಿ ತಿಳಿಸಿದ್ದಾರೆ. 

ಅಧ್ಯಯನ ತಂಡದಲ್ಲಿ ಪರಿಸರ ಕಾರ್ಯಕರ್ತರಾದ ಗೌರೀಶ ಭಟ್, ಅಮಿತ ಪಟಗಾರ್, ಶ್ರೀಧರ ಪಟಗಾರ, ವಿನಾಯಕ ವೈದ್ಯ, ಅರುಣ ನಾಯ್ಕ, ಆನಂದ ಹೆಗಡೆ, ಕವಿತಾ ಭಟ್ ಹಾಗೂ ನಚಿದನ ಹೆಗಡೆ ಕಾರ್ಯನಿರ್ವಹಿಸಿದ್ದಾರೆ. 

ಕೊಳ್ಳದ ಜೌಗು ಪ್ರದೇಶವನ್ನು ಪ್ರತಿಬಿಂಬಿಸುವ ಒಂದಂಕಿ ಮರ 
ಒಂದಂಕಿ ಮರದ ಬೇರುಗಳು 
ಬೇಡ್ತಿ–ವರದಾ ಅಘನಾಶಿನಿ–ವೇದಾವತಿ ನದಿಗಳ ಜೋಡಣೆಯಿಂದ ಅತ್ಯಂತ ಪ್ರಾಚೀನ ಕಾಲದ ರಾಮಪತ್ರೆ ಜಡ್ಡಿ ಕಾಡುಗಳ ಶೇಕಡಾ 75ಕ್ಕೂ ಹೆಚ್ಚು ಭಾಗ ನಾಶವಾಗುತ್ತವೆ
ನರಸಿಂಹ ಹೆಗಡೆ ವಾನಳ್ಳಿ, ಪರಿಸರ ಕಾರ್ಯಕರ್ತ
ಹವಾಗುಣ ವೈಪರೀತ್ಯದ ಈ ಕಾಲದಲ್ಲಿ ಹೆಚ್ಚು ಇಂಗಾಲ ಶೇಖರಿಸುವ ಸಾಮರ್ಥ್ಯ ಹೊಂದಿರುವ ಈ ಜೌಗು ಪ್ರದೇಶಗಳನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ
ಗಿರೀಶ ಪೂಜಾರ್ ,ಇಸ್ರೊದ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.