ADVERTISEMENT

‘ಪ್ರಜಾವಾಣಿ‘ ವರದಿ ಪರಿಣಾಮ: ಭತ್ತ ಖರೀದಿಗೆ ನೋಂದಣಿ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 11:26 IST
Last Updated 14 ಜನವರಿ 2022, 11:26 IST
ಜ.10ರಂದು ‘ಪ್ರಜಾವಾಣಿ’ಯ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ಪ್ರಕಟವಾಗಿದ್ದ ವಿಸ್ತೃತ ವರದಿ
ಜ.10ರಂದು ‘ಪ್ರಜಾವಾಣಿ’ಯ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ಪ್ರಕಟವಾಗಿದ್ದ ವಿಸ್ತೃತ ವರದಿ   

ಕಾರವಾರ: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಭತ್ತ ಖರೀದಿಗೆ ರೈತರ ನೋಂದಣಿ ಅವಧಿಯನ್ನು ಫೆ.28ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಕುಮಟಾ, ಮುಂಡಗೋಡ, ಜೊಯಿಡಾ, ಹಳಿಯಾಳ ತಾಲ್ಲೂಕುಗಳಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು, ಅಕ್ಷರ ದಾಸೋಹ ಮಳಿಗೆ ಹಾಗೂ ಶಿರಸಿ ಬನವಾಸಿ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತ ಖರೀದಿಗೆ ರೈತರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರದಿಂದ ಈಗಾಗಲೇ ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ₹ 1,940 ಹಾಗೂ ಗ್ರೇಡ್ ಎ ಭತ್ತಕ್ಕೆ ₹ 1,960ರಂತೆ ದರ ನಿಗದಿಪಡಿಸಲಾಗಿದೆ. ಕೃಷಿ ಇಲಾಖೆ ಜಾರಿಗೊಳಿಸಿರುವ ‘ಫ್ರುಟ್ಸ್’ ದತ್ತಾಂಶದಲ್ಲಿ ನೋಂದಣಿ ಮಾಡಿಕೊಂಡಿರುವ ರೈತರು ಮಾತ್ರ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

‘ಫ್ರುಟ್ಸ್’ ದತ್ತಾಂಶದಲ್ಲಿ ನೋಂದಣಿ ಮಾಡಿಸಲು ರೈತರು ಪಹಣಿ ಪತ್ರ, ಆಧಾರ್ ಸಂಖ್ಯೆ (ಪ್ರತಿ), ಬ್ಯಾಂಕ್ ಖಾತೆ ಸಂಖ್ಯೆ, ಐ.ಎಫ್‍.ಎಸ್‍.ಸಿ ಕೋಡ್, ಬ್ಯಾಂಕಿನ ವ್ಯವಸ್ಥಾಪಕರು ದೃಢೀಕರಿಸಿರುವ ಭಾವಚಿತ್ರವಿರುವ ಪಾಸ್‍ಪುಸ್ತಕದ ಪ್ರತಿ ಮತ್ತು ಬೆಳೆ ದೃಢೀಕರಣ ಪತ್ರಗಳನ್ನು ಹಾಜರುಪಡಿಸಬೇಕು. ಸಂಬಂಧಿಸಿದ ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ನೋಂದಾಯಿತ ಸಂಖ್ಯೆ ಹೊಂದಿರುವ ರೈತರಿಂದ ಮಾತ್ರ ಭತ್ತ ಖರೀದಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ (ಒಂದು ಎಕರೆಗೆ 25 ಕ್ವಿಂಟಲ್‌ನಂತೆ) ಭತ್ತ ಖರೀದಿ ಮಾಡಲಾಗುವುದು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08382 226243 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಧ್ವನಿಯಾದ ‘ಪ್ರಜಾವಾಣಿ’:

ಭತ್ತ ಬೆಳೆಗಾರರು ಅಕಾಲಿಕ ಮಳೆಯಿಂದ ಕಂಗೆಟ್ಟಿದ್ದಾರೆ. ಸರ್ಕಾರದಿಂದ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭವಾಗುವುದನ್ನು ಕಾಯುತ್ತಿದ್ದರು. ಆದರೆ, ಅವುಗಳನ್ನು ತೆರೆದಿರುವ ಬಗ್ಗೆ ಹೆಚ್ಚಿನ ರೈತರಿಗೆ ಅರಿವಿಗೇ ಬರಲಿಲ್ಲ. ಹಾಗಾಗಿ ನೋಂದಣಿ ಮಾಡಿಕೊಳ್ಳಲು ಅವಧಿ ಸಾಕಾಗಲಿಲ್ಲ. ಮತ್ತಷ್ಟು ದಿನಗಳ ಅವಕಾಶ ಕೊಡಬೇಕು ಎಂಬ ಮನವಿಗಳು ರೈತರಿಂದ ಕೇಳಿಬಂದಿತ್ತು.

ಈ ಬಗ್ಗೆ ಜ.10ರಂದು ‘ಪ್ರಜಾವಾಣಿ’ಯ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ, ‘ಭತ್ತಕ್ಕೆ ಬೆಂಬಲ ಬೆಲೆ: ಅವಧಿ ವಿಸ್ತರಣೆಗೆ ಬೇಡಿಕೆ’ ಎಂಬ ಶೀರ್ಷಿಕೆಯಡಿ ವಿಸ್ತೃತವಾದ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.