
ಕಾರವಾರ: ತಾಲ್ಲೂಕಿನ ಕದ್ರಾದ ಯುವತಿ ರಿಶೇಲ್ ಡಿಸೋಜಾ ಆತ್ಮಹತ್ಯೆಗೆ ಕಾರಣನಾದ ಆರೋಪಿ ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಘಟಕ ಆಕ್ಷೇಪಿಸಿದೆ.
‘ರಿಶೇಲ್ ಮೃತಪಟ್ಟು 15 ದಿನ ಕಳೆದರೂ ಆಕೆಯ ಸಾವಿಗೆ ಕಾರಣನಾದ ಆರೋಪ ಹೊತ್ತ ಯುವಕ ಚಿರಾಗ ಚಂದ್ರಹಾಸ ಕೊಠಾರಕರ್‌ನನ್ನು ಬಂಧಿಸಿಲ್ಲ. ಆಕೆಯ ಮೃತದೇಹವನ್ನು ಮೊದಲು ಮರಣೋತ್ತರ ಪರೀಕ್ಷೆ ನಡೆಸಿದ್ದು ಸರಿಯಾಗಿಲ್ಲ’ ಎಂದು ಒಕ್ಕೂಟ ಮತ್ತು ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮದಿಂದ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ‘ಮೃತಳ ಮೃತದೇಹದ ಮರಣೋತ್ತರ ಪರೀಕ್ಷೆ ತರಾತುರಿಯಲ್ಲಿ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ಇಬ್ಬರು ಯುವಕರು ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ಅವರನ್ನು ವಿಚಾರಣೆ ನಡೆಸಿಲ್ಲ. ಒಂದು ವಾರದೊಳಗೆ ಆರೋಪಿ ಬಂಧಿಸದಿದ್ದರೆ ಹೋರಾಟ ನಡೆಯಲಿದೆ’ ಎಂದರು.
ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಪ್ರದೀಪ ಡಿಮೆಲ್ಲೊ, ‘ಆತ್ಮಹತ್ಯೆ ಅಥವಾ ಶಂಕಾಸ್ಪದ ಸಾವಿನ ಘಟನೆ ಇದ್ದರೆ ಸಂಜೆಯ ನಂತರ ಮರಣೋತ್ತರ ಪರೀಕ್ಷೆ ನಡೆಸುವಂತಿಲ್ಲ. ಮೊದಲ ಬಾರಿಗೆ ನಡೆಸಿದ ಮರಣೋತ್ತರ ಪರೀಕ್ಷೆಯ ವರದಿ ಸರಿಯಾಗಿ ನೀಡಿಲ್ಲ. ತಪ್ಪು ಮಾಹಿತಿಗಳಿಂದ ಕೂಡಿದೆ. ತನಿಖೆ ಸರಿಯಾದ ದಾರಿಯಲ್ಲಿ ಸಾಗಿಲ್ಲ. ಆರೋಪಿ ಪ್ರಭಾವಿ ಕುಟುಂಬಕ್ಕೆ ಸೇರಿದವನಾದ ಕಾರಣಕ್ಕೆ ಸರಿಯಾದ ಸಾಕ್ಷಿ ಕಲೆಹಾಕಲು ಪೊಲೀಸ್ ಇಲಾಖೆ ಎಡವಿದೆ’ ಎಂದು ಆರೋಪಿಸಿದರು.
ವಕೀಲ ಪ್ರದೀಪ ಡಿ.ಜೆ, ಯುವತಿಯ ಪಾಲಕರಾದ ಕ್ರಿಸ್ತೋದ್ ಡಿಸೋಜಾ ಮತ್ತು ರೀನಾ ಡಿಸೋಜಾ, ಲಿಯೊ ಲೂಯಿಸ್, ವಿಲ್ಸನ್ ಫರ್ನಾಂಡಿಸ್, ಕ್ಲಾಸನ್ ಕಾರ್ಕಳ, ಕ್ಲೆಮೆನ್, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.