ಶಿರಸಿ: ಬೇಡ್ತಿ–ಅಘನಾಶಿನಿ ಕಣಿವೆಗಳ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮಾಡಲು ಹಲವು ಹಂತಗಳಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. 2026ರ ಜ.11ರಂದು ಶಿರಸಿಯಲ್ಲಿ ಬೃಹತ್ ಜನ ಸಮಾವೇಶ ನಡೆಸಲು ನಿಶ್ಚಯಿಸಲಾಗಿದೆ’ ಎಂದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರಾಗಿರುವ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸ್ವಣವಲ್ಲೀ ಮಠದ ಸುಧರ್ಮ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಕೊಳ್ಳ ಸಂರಕ್ಷಣಾ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಬೇಡ್ತಿ ಸಮಿತಿ ಸಭೆ ವ್ಯಾಪಕ ಜನ ಜಾಗೃತಿ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಶಾಲ್ಮಲಾ, ಪಟ್ಟಣದ ಹೊಳೆ, ಬೇಡ್ತಿ, ಅಘನಾಶಿನಿ ನದೀ ತೀರಗಳಲ್ಲಿ ಮುಂಬರುವ ದಿನಗಳಲ್ಲಿ ರ್ಯಾಲಿ, ಜಾಗೃತಿ ಸಭೆಗಳು ನಿರಂತರವಾಗಿ ನಡೆಯಲಿವೆ’ ಎಂದರು.
ಬೇಡ್ತಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಸದ್ಯ ಬೇಡ್ತಿ ಅಘನಾಶಿನಿ ಯೋಜನಾ ವರದಿ ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಬೇಡ್ತಿ-ವರದಾ ಯೋಜನೆಯ ಕಾರ್ಯ ಸಾಧ್ಯತಾ ವರದಿ ತಯಾರಾಗಿದೆ. ಸಮಗ್ರ ಯೋಜನಾ ವರದಿ ತಯಾರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಇನ್ನೂ ಮನವಿ ಮಾಡಿಲ್ಲ. ಆರಂಭಿಕ ಹಂತದಲ್ಲೇ ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಒಟ್ಟಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದರು. ಇದೇ ವೇಳೆ ಬೇಡ್ತಿ-ವರದಾ ಯೋಜನೆ ತಿರುವು ಯೋಜನೆಗಳ ತಯಾರಿ ಕುರಿತು ಲಭ್ಯ ಮಾಹಿತಿ, ಫೋಟೊ, ನಕ್ಷೆಗಳನ್ನು ಅಶೀಸರ ಅವರು ಬಹಿರಂಗ ಪಡಿಸಿದರು.
ಅಘನಾಶಿನಿ ಕಣಿವೆ ಪ್ರದೇಶದ ಸಂಚಾಲಕ ಬಾಲಚಂದ್ರ ಸಾಯಿಮನೆ ಹಾಗೂ ಗೋಪಾಲಕೃಷ್ಣ ತಂಗಾರ್ಮನೆ ಮಾತನಾಡಿ, ‘ಅವರು ಸದ್ಯದಲ್ಲೇ ನೆಲಮಾವು ಮಠದಲ್ಲಿ ಸಭೆ ನಡೆಸಲಿದ್ದೇವೆ. ಅಘನಾಶಿನಿ ಕಣಿವೆ ಜನತೆ ಹೊಸ ಯೋಜನೆ ಬಗ್ಗೆ ಸುದ್ದಿ ತಿಳಿದು ಅಘಾತಗೊಂಡಿದ್ದಾರೆ’ ಎಂದು ತಿಳಿಸಿದರು.
ಜೀವ ವಿಜ್ಞಾನಿ ಕೇಶವ ಕೊರ್ಸೆ ಅವರು, ‘ನ.23ರಂದು ಶಿರಸಿಯಲ್ಲಿ ವಿಜ್ಞಾನಿಗಳ ಸಮ್ಮೇಳನದಲ್ಲಿ ಪಶ್ಚಿಮ ಘಟ್ಟದ ಮೇಲೆ ನದಿ ಜೋಡಣೆ ಸೇರಿದಂತೆ ಬೃಹತ್ ಯೋಜನೆಗಳ ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲಿದ್ದೇವೆ’ ಎಂದರು.
ಮಠದ ಅಧ್ಯಕ್ಷ ವಿ.ಎನ್.ಹೆಗಡೆ, ಕೇಂದ್ರ ಮಾತೃ ಮಂಡಳಿಯ ಗೀತಾ ಶೀಗೆಮನೆ, ಗಣಪತಿ ಕೆ., ಪ್ರಮುಖರಾದ ಟಿ.ಆರ್.ಹೆಗಡೆ, ವೆಂಕಟ್ರಮಣ, ಎಂ.ಕೆ.ಭಟ್, ಸೂರ್ಯ ಹಿತ್ಲಳ್ಳಿ, ಶ್ರೀಪಾದ ಶಿರನಾಲ, ಸುರೇಶ ಹಕ್ಕಿಮನೆ, ಆರ್.ಎಸ್.ಹೆಗಡೆ, ಗಣಪತಿ ನೀರಗಾನ, ಈಶ್ವರ ಹಸ್ರಗೋಡ, ಎಂ.ಜಿ.ಗೆಜ್ಜೆ, ಮಂಜುನಾಥ ಭಂಡಾರಿ, ಜಿ.ವಿ.ಹೆಗಡೆ, ತಮ್ಮಾ ಕುಣಬಿ, ನಾಗೇಶ ನಾಯ್ಕ, ರಾಜು ಪೂಜಾರಿ ಇತರರಿದ್ದರು.
ವಿವಿಧೆಡೆ ಜಾಗೃತಿ ಕಾರ್ಯ
ಶಾಲ್ಮಲಾ ನದಿ ದಡದ ಸಹಸ್ರಲಿಂಗದಲ್ಲಿ ಅ.16ರಂದು ನಡೆಯುವ ರ‍್ಯಾಲಿ ಕುರಿತು ಸಂಚಾಲಕ ಅನಂತ ಭಟ್ ಹುಳಗೋಳ ಬೇಡ್ತಿ ನದಿ ಸಮೀಪ ತುಂಬೇಬೀಡನಲ್ಲಿ ಅ.23ರಂದು ಬೆಳಿಗ್ಗೆ ನಡೆಯುವ ರ‍್ಯಾಲಿ ಬಗ್ಗೆ ನರಸಿಂಹ ಸಾತೊಡ್ಡಿ ಅ.27ರಂದು ವಾನಳ್ಳಿಯಲ್ಲಿ ನಡೆಯುವ ಸಭೆಯ ಕುರಿತು ರಾಜಾರಾಮ ಪಟ್ಟಣದ ಹೊಳೆ ಬಳಿ ಎಫಡಿ ಮಠದಲ್ಲಿ ಸಭೆ ನಡೆಸುವ ವಿಷಯವನ್ನು ರಾಯಪ್ಪಣ್ಣ ತಿಳಿಸಿದರು. ಪಟ್ಟಣದ ಹೊಳೆಗುಂಟ ನಡೆಸುವ ಪಾದಯಾತ್ರೆ ಬಗ್ಗೆ ಎನ್.ಆರ್.ಹೆಗಡೆ ತಿಳಿಸಿದರು.
ಶಿರಸಿ ಸಿದ್ದಾಪುರ ಯಲ್ಲಾಪುರ ತಾಲ್ಲೂಕುಗಳ 15 ಪಂಚಾಯಿತಿಗಳು 20 ಸಹಕಾರ ಸಂಘಗಳು ಬೇಡ್ತಿ ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡಿವೆ–ಗಣಪತಿ ಕೆ. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.