
ಶಿರಸಿ: ನದಿ ಜೋಡಣೆ ವಿರೋಧಿಸಿ ನಗರದಲ್ಲಿ ಜ.11ರಂದು ನಡೆಯಲಿರುವ ಬೃಹತ್ ಜನಾಂದೋಲನ ಯಶಸ್ಸಿಗೆ ಸಾರ್ವಜನಿಕರು ಎಲ್ಲ ರೀತಿಯಲ್ಲಿಯೂ ಸಹಕಾರ ನೀಡುವಂತೆ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.
ನಗರದ ಪೂಗಭವನದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಶ್ರೀಗಳು, ‘ನದಿ ಜೋಡಣೆಗೆ ಪ್ರಬಲ ವಿರೋಧ ವ್ಯಕ್ತಗೊಳಿಸುವುದು ಅನಿವಾರ್ಯ. ಹೀಗಾಗಿ ತನು, ಮನ, ಧನಗಳ ವಿಷಯದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದರು.
ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ‘ಅಘನಾಶಿನಿ- ಬೇಡ್ತಿ- ಶಾಲ್ಮಲಾ- ಪಟ್ಟಣದ ಹೊಳೆ ಕಣಿವೆ ಉಳಿಸಿ ಚಳವಳಿ ನಾಡಿನ ಎಲ್ಲೆಡೆ ಗಮನ ಸೆಳೆದಿದೆ. ಜ.11ರ ಸಮಾವೇಶದ ಧ್ವನಿ ದೆಹಲಿಗೂ ಕೇಳಿಸುವಂತೆ ಬೃಹತ್ ಜಾಗೃತಿ ಅಭಿಯಾನ ನಡೆಸಬೇಕು’ ಎಂದು ಕಣಿವೆಗಳ ಜನತೆಗೆ ಮನವಿ ಮಾಡಿದರು.
ಇದೇ ವೇಳೆ ವಿವಿಧ ಮಠಗಳ ಸಂತರು, ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ ಹೆಗಡೆ, ಜನಪ್ರತಿನಿಧಿಗಳು, ವಿವಿಧ ಕ್ಷೇತ್ರದ ತಜ್ಞರ ಪಾಲ್ಗೊಳ್ಳುವಿಕೆಯ ಸಮಾವೇಶದ ವ್ಯಾಪಕ ವ್ಯವಸ್ಥೆಗೆ ಶಿರಸಿ ನಗರದ ಗಣ್ಯರ ಸಂಚಲನಾ ಸಮಿತಿ ರಚಿಸಲಾಯಿತು. ಶಿರಸಿ ಹಾಗೂ ಸುತ್ತಲಿನ ಮಹಿಳಾ ಸಂಘ– ಸಂಸ್ಥೆಗಳ ಸಭೆಯನ್ನು ನಡೆಸಿ ಮನೆ ಮನೆಗೆ ಸಂದೇಶ ತಲುಪಿಸಬೇಕು. ವಿವಿಧ ಜಾತಿ ಸಮುದಾಯಗಳ ಪ್ರಮುಖರ ಸಭೆಯನ್ನು ಡಿ.27ರಂದು ಏರ್ಪಡಿಸಬೇಕು ಎಂದು ನಿರ್ಧರಿಸುವ ಜತೆ, ಸಹಕಾರ ಸಂಸ್ಥೆಗಳ ಬೆಂಬಲ ಪಡೆಯಲಾಯಿತು.
ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸತೀಶ ಭಟ್ ಸ್ವಾಗತಿಸಿದರು. ಶ್ಯಾಮಸುಂದರ ಭಟ್ ಪ್ರಾಸ್ತಾವಿಕ ಮಾತನಾಡಿದರು. ಲೋಕೇಶ ಹೆಗಡೆ ನಿರ್ವಹಿಸಿದರು. ಹುಳಗೋಳ ಅನಂತ ವಂದಿಸಿದರು.
ಬೃಹತ್ ಜನಾಂದೋಲನದ ಪೂರ್ವಭಾವಿಯಾಗಿ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ನದಿ ಜೋಡಣೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಬೇಕುಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.