ADVERTISEMENT

ಕಾರವಾರ| 3 ವರ್ಷದಲ್ಲಿ 5 ಸಾವಿರಕ್ಕೂ ಹೆಚ್ಚು ಅಪಘಾತ: 726 ಮಂದಿ ದುರ್ಮರಣ

ಗಣಪತಿ ಹೆಗಡೆ
Published 9 ಫೆಬ್ರುವರಿ 2026, 7:09 IST
Last Updated 9 ಫೆಬ್ರುವರಿ 2026, 7:09 IST
ಅಂಕೋಲಾ ತಾಲ್ಲೂಕಿನ ಕಂಚಿನಬಾಗಿಲ ತಿರುವಿನಲ್ಲಿ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿರುವುದು.
ಅಂಕೋಲಾ ತಾಲ್ಲೂಕಿನ ಕಂಚಿನಬಾಗಿಲ ತಿರುವಿನಲ್ಲಿ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿರುವುದು.   

ಕಾರವಾರ: ಗಂಗಾವಳಿ–ಮಂಜಗುಣಿ ಸೇತುವೆಯ ಗೋಡೆಗೆ ಬೈಕ್ ಬಡಿದು ಯುವಕನೊಬ್ಬ ಈಚೆಗೆ ಮೃತಪಟ್ಟಿದ್ದ. ಅಂಕೋಲಾ ತಾಲ್ಲೂಕಿನ ಮೊಗಟಾ ಸಮೀಪ ರಸ್ತೆಗೆ ಅಡ್ಡಬಂದ ಕಾಡುಪ್ರಾಣಿ ತಪ್ಪಿಸಲು ಹೋಗಿ ಬೈಕ್ ಸವಾರರೊಬ್ಬರು ಹೆಲ್ಮೆಟ್ ಧರಿಸಿದ್ದರೂ ಬಿದ್ದು ತಲೆಗೆ ಗಂಭೀರವಾಗಿ ಏಟು ಬಿದ್ದಿತ್ತು.‌

ಹೊಂಡ ಬಿದ್ದ ರಸ್ತೆ, ಅವೈಜ್ಞಾನಿಕ ಸೇತುವೆ, ಅಪಾಯಕಾರಿ ತಿರುವು, ವನ್ಯಜೀವಿಗಳ ಹಾವಳಿ...  ಹೀಗೆ ತಮ್ಮದಲ್ಲದ ತಪ್ಪಿಗೆ ವಾಹನ ಸವಾರರು ಅಪಘಾತಕ್ಕೀಡಾಗುವ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 5,124 ರಸ್ತೆ ಅಪಘಾತಗಳು ಸಂಭವಿಸಿದ್ದು, 726 ಮಂದಿ ಅಸುನೀಗಿರುವುದಾಗಿ ಪೊಲೀಸ್ ಇಲಾಖೆಯ ವರದಿ ಹೇಳುತ್ತಿದೆ.

ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 84, ರಾಜ್ಯ ಹೆದ್ದಾರಿಯಲ್ಲಿ 45, ಗ್ರಾಮೀಣ ರಸ್ತೆಗಳಲ್ಲಿ ನಡೆದ ಅಪಘಾತಗಳಲ್ಲಿ 85 ಮಂದಿ ಜೀವ ತೆತ್ತಿದ್ದಾರೆ. ಒಂದೇ ವರ್ಷದಲ್ಲಿ 214 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಹಿಂದಿನ ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ 2025ರಲ್ಲಿ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ ಎಂಬುದಾಗಿ ಪೊಲೀಸ್ ಇಲಾಖೆ ಹೇಳಿಕೊಳ್ಳುತ್ತಿದೆ.

ADVERTISEMENT

‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ವಲಯಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಪಾಯಕಾರಿ ತಿರುವುಗಳಲ್ಲಿ ರಸ್ತೆ ವಿಸ್ತರಣೆಯನ್ನೂ ಮಾಡುತ್ತಿಲ್ಲ. ರಾಜ್ಯ ಹೆದ್ದಾರಿಯ ತಿರುವುಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸದ ಪರಿಣಾಮ ಎದುರು ಬದುರಾಗಿ ಬರುವ ವಾಹನ ಸವಾರರಿಗೆ ರಸ್ತೆ ಕಾಣದೆ ಅಪಘಾತಕ್ಕೀಡಾಗುವ ಘಟನೆಗಳೂ ನಡೆದಿವೆ’ ಎನ್ನುತ್ತಾರೆ ಟ್ಯಾಕ್ಸಿ ಚಾಲಕರ ಸಂಘದ ಪದಾಧಿಕಾರಿ ಸಂತೋಷ ನಾಯ್ಕ.

‘ಗ್ರಾಮೀಣ ಭಾಗದ ಕಿರಿದಾದ ರಸ್ತೆಗಳಲ್ಲಿ ಏಕಕಾಲಕ್ಕೆ ಎರಡು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಕಡೆಗಳಲ್ಲಿ ಎದುರಿನಿಂದ ಬರುವ ವಾಹನಕ್ಕೆ ದಾರಿ ಬಿಟ್ಟುಕೊಡಲು ಅನುಕೂಲವಾಗುವಂತೆ ರಸ್ತೆಯ ಪಕ್ಕದಲ್ಲಿ ಮಣ್ಣು ತುಂಬಿ ಜಾಗ ಮಾಡಿಕೊಡುವ ಕೆಲಸವೂ ನಡೆದಿಲ್ಲ. ಇದರಿಂದ ದಾರಿ ಬಿಟ್ಟುಕೊಡಲು ಮುಂದಾಗುವ ವೇಳೆ ವಾಹನ ಚರಂಡಿಯಲ್ಲಿ ಸಿಲುಕಿ ಪಲ್ಟಿಯಾಗುವ ಘಟನೆಗಳೂ ನಡೆದಿವೆ’ ಎನ್ನುತ್ತಾರೆ ವಾಹನ ಸವಾರ ಮಹಾಬಲೇಶ್ವರ ದೇಸಾಯಿ.

‘ಅರಣ್ಯ ಪ್ರದೇಶ ಹೆಚ್ಚಿರುವ ಜಿಲ್ಲೆಯ ಹಲವು ರಸ್ತೆಗಳಲ್ಲಿ ಪದೇ ಪದೇ ವನ್ಯಜೀವಿಗಳು ಹೆದ್ದಾರಿ ದಾಟಿ ಸಾಗುತ್ತವೆ. ಬಹುತೇಕ ಸಂದರ್ಭಗಳಲ್ಲಿ ವಾಹನಗಳಿಗೆ ಎದುರಾಗಿ ಪ್ರಾಣಿಗಳು ಅಪಘಾತಕ್ಕೆ ಸಿಲುಕುವ ಜೊತೆಗೆ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆಗಳು ಹೆಚ್ಚಿವೆ. ವನ್ಯಜೀವಿಗಳ ಓಡಾಟ ಹೆಚ್ಚಿರುವ ಮಾರ್ಗಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸುವ ಕೆಲಸವೂ ನಡೆದಿಲ್ಲ’ ಎಂದು ದೇವಿಮನೆ ಗ್ರಾಮದ ರಾಘವೇಂದ್ರ ಭಟ್ ದೂರಿದರು.

ಸಂಚಾರ ನಿಯಮ ಉಲ್ಲಂಘನೆ

ನಗರ ಪ್ರದೇಶಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಸಂಚಾರ ನಿಯಮ ಉಲ್ಲಂಘಿಸುವ ಘಟನೆ ಹೆಚ್ಚುತ್ತಿದೆ. ಇದು ಕೂಡ ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ದ್ವಿಚಕ್ರ ವಾಹನ ಚಲಾಯಿಸುವವರು ಹೆಲ್ಮೆಟ್, ನಾಲ್ಕು ಚಕ್ರದ ವಾಹನ ಚಲಾಯಿಸುವವರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಆಗಿದ್ದರೂ ಈ ನಿಯಮಗಳ ಪಾಲನೆ ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ಸಂಚಾರ ಠಾಣೆ ಪೊಲೀಸರು ನಗರ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿದ್ದರೂ, ಗ್ರಾಮೀಣ ಪ್ರದೇಶದಲ್ಲಿ, ಹೆದ್ದಾರಿಗಳಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸುವವರಿಗೆ ಬಿಗು ಕ್ರಮ ಕೈಗೊಳ್ಳುವತ್ತ ಪೊಲೀಸ್ ಇಲಾಖೆ ಗಮನ ನೀಡುತ್ತಿಲ್ಲ ಎಂಬುದು ಜನರ ದೂರು.

‘ಅಪ್ರಾಪ್ತರು ವಾಹನ ಚಲಾಯಿಸುವದು ಈಚೆಗೆ ಹೆಚ್ಚುತ್ತಿದೆ. ವೃದ್ಧರು ಕೂಡ ವಾಹನ ಚಲಾಯಿಸಿಕೊಂಡು ಹೋಗುತ್ತಿರುವುದು ಅಧಿಕವಾಗುತ್ತಿದೆ. ಅವರಿಂದ ರಸ್ತೆ ಅಪಘಾತಗಳು ನಡೆಯುತ್ತಿದೆ. ಕೆಲದಿನಗಳ ಹಿಂದೆ ಕಾರವಾರದಲ್ಲಿ ಅಪ್ರಾಪ್ತ ಯುವಕನೊಬ್ಬ ತಾಯಿಯನ್ನು ಕೂರಿಸಿಕೊಂಡು ಬೈಕ್ ಚಲಾಯಿಸುವಾಗ ಅಪಘಾತಗೊಂಡು ಮೃತಪಟ್ಟ ಘಟನೆ ನಡೆದಿತ್ತು. ಆದರೂ, ಪಾಲಕರಾಗಲಿ, ಪೊಲೀಸರಾಗಲಿ ಎಚ್ಚೆತ್ತುಕೊಂಡಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ದೇವಿದಾಸ ನಾಯ್ಕ.

‘ಮೂರು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯ 58,425 ಪ್ರಕರಣ ದಾಖಲಿಸಲಾಗಿದೆ. ₹2.84 ಕೋಟಿ ದಂಡ ವಸೂಲಿ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದ್ದು, 810 ಜನರ ಚಾಲನಾ ಪರವಾನಗಿ (ಡಿಎಲ್) ರದ್ದು‍ಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹೇಳಿದರು.

ಹೊನ್ನಾವರ ತಾಲ್ಲೂಕಿನ ಗುಣವಂತೆಯ ಸಮೀಪ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಸಂಭವಿಸಿದ್ದ ಸರಣಿ ಅಪಘಾತ.
ಕಾರವಾರ ತಾಲ್ಲೂಕಿನ ಕೈಗಾ ಸಮೀಪ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟೆಂಪೊ ಪಲ್ಟಿಯಾಗಿರುವುದು.
ರಸ್ತೆ ಅಪಘಾತ ಪ್ರಕರಣ ತಗ್ಗಿಸಲು ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಸುರಕ್ಷತೆ ಕ್ರಮ ಅನುಸರಿಸಲಾಗಿದೆ. ಸಂಚಾರ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ
ದೀಪನ್ ಎಂ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹೆಚ್ಚು ವಾಹನ ಸಂಚರಿಸುವ ಕಿರಿದಾದ ರಸ್ತೆಗಳ ತಿರುವು ಪ್ರದೇಶಗಳ ವಿಸ್ತರಣೆ ಕೆಲಸ ನಡೆಯಬೇಕು. ಹೆದ್ದಾರಿಗಳಲ್ಲಿ ಬೀಡಾಡಿ ದನಗಳ ಓಡಾಟಕ್ಕೆ ಕಡಿವಾಣ ಹಾಕಿದರೆ ಅಪಘಾತ ನಿಯಂತ್ರಣಕ್ಕೆ ಅನುಕೂಲವಾಗಲಿದೆ
ಸುನೀಲ ನಾಯ್ಕ, ಸಾಮಾಜಿಕ ಕಾರ್ಯಕರ್ತ

ಬಸ್ ಅಪಘಾತಗಳೆ ಅಧಿಕ

ವಾರದ ಹಿಂದಷ್ಟೆ ಕಾರವಾರ ತಾಲ್ಲೂಕಿನ ಸಿದ್ಧರ ಗ್ರಾಮದಲ್ಲಿ ಸಾರಿಗೆ ಸಂಸ್ಥೆಯ ಬಸ್ ತಾಂತ್ರಿಕ ಸಮಸ್ಯೆಯಿಂದ ರಸ್ತೆ ಪಕ್ಕದ ಚರಂಡಿಗೆ ಇಳಿದಿತ್ತು. ಮೂರು ದಿನದ ಹಿಂದೆ ಅಂಕೋಲಾದ ಹಾರವಾಡ ಬಳಿ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆ ಬಿಟ್ಟು ಪಕ್ಕದ ಗದ್ದೆಗೆ ನುಗ್ಗಿತ್ತು. ಇಂತಹ ಹತ್ತಾರು ಘಟನೆಗಳು ಪ್ರತಿ ತಿಂಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ನೂರಾರು ಪ್ರಯಾಣಿಕರು ಗಾಯಗೊಂಡ ಘಟನೆ ವರದಿಯಾಗುತ್ತಿದೆ. ‘ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬಸ್‌ಗಳ ನಿರ್ವಹಣೆ ಕಡಿಮೆಯಾಗುತ್ತಿದೆ. ಬಸ್‌ಗಳ ಕೊರತೆಯ ಕಾರಣಕ್ಕೆ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೂ ಬಸ್‌ಗಳನ್ನು ಗ್ರಾಮೀಣ ಪ್ರದೇಶಕ್ಕೆ ಓಡಿಸಲಾಗುತ್ತಿದೆ. ಹಲವು ಬಾರಿ ತಾಂತ್ರಿಕ ಸಮಸ್ಯೆ ಇರುವ ಬಸ್‌ಗಳು ಚಾಲಕನ ನಿಯಂತ್ರಣಕ್ಕೆ ಸಿಗದೆ ಅಪಘಾತಕ್ಕೆ ತುತ್ತಾಗುವ ಘಟನೆ ನಡೆಯುತ್ತಿದೆ’ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ನಿವೃತ್ತ ಅಧಿಕಾರಿಯೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.