ADVERTISEMENT

ಯಾಣ: ರೋಪ್ ವೇಗೆ ₹ 2.50 ಕೋಟಿ ಮೀಸಲು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 15:36 IST
Last Updated 24 ಆಗಸ್ಟ್ 2021, 15:36 IST
ಕುಮಟಾ ತಾಲ್ಲೂಕಿನ ಯಾಣದ ಎತ್ತರ ಪ್ರದೇಶದಲ್ಲಿರುವ ಭೈರವೇಶ್ವರ ಶಿಖರ ತಲುಪಲು ರೋಪ್‌ ವೇ ಯೋಜನೆಗಾಗಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಈಚೆಗೆ ಸಮೀಕ್ಷೆ ನಡೆಸಿದರು.
ಕುಮಟಾ ತಾಲ್ಲೂಕಿನ ಯಾಣದ ಎತ್ತರ ಪ್ರದೇಶದಲ್ಲಿರುವ ಭೈರವೇಶ್ವರ ಶಿಖರ ತಲುಪಲು ರೋಪ್‌ ವೇ ಯೋಜನೆಗಾಗಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಈಚೆಗೆ ಸಮೀಕ್ಷೆ ನಡೆಸಿದರು.   

ಕುಮಟಾ: ‘ನೆರೆ ಪರಿಹಾರ ನಿಧಿಯ ₹ 6.50 ಕೋಟಿ ಮೊತ್ತದಲ್ಲಿ ₹ 2.50 ಕೋಟಿಯನ್ನು ಯಾಣದಲ್ಲಿ ಭೈರವೇಶ್ವರ ಶಿಖರ ತಲುಪಲು ರೋಪ್ ವೇ ಯೋಜನೆಗಾಗಿ ಬಳಸಿಕೊಳ್ಳಲಾಗುವುದು’ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಯೋಜನೆಯ ಬಗ್ಗೆ ಮಂಗಳವಾರ ಮಾಹಿತಿ ನೀಡಿದ ಅವರು, ‘ಈ ಉದ್ದೇಶಕ್ಕಾಗಿಯೇ ₹ 2.50 ಕೋಟಿ ಮೀಸಲಿಡಲಾಗಿದೆ. ಹಣ ಬಳಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಒಪ್ಪಿಗೆ ಸಹ ಪಡೆಯಲಾಗಿದೆ. ಲೋಕೋಪಯೋಗಿ ಇಲಾಖೆಗೆ ಯೋಜನೆಯ ಬಗ್ಗೆ ಪ್ರಸ್ತಾವ ಕಳುಹಿಸಲಾಗಿದೆ. ಕಡಿಮೆಯಾಗುವ ಮೊತ್ತವನ್ನು ಇಲಾಖೆಯಿಂದ ಮಂಜೂರಿ ಮಾಡಿಸಿಕೊಳ್ಳಲಾಗುವುದು. ಈ ಯೋಜನೆ ಅನುಷ್ಠಾನಗೊಂಡರೆ ಪ್ರವಾಸಿ ಹಾಗೂ ಪುಣ್ಯ ಕ್ಷೇತ್ರವಾದ ಯಾಣಕ್ಕೆ ಬರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆಯ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುದರ್ಶನ್ ಹೊನ್ನಾವರ, ‘ಯಾಣದ ಸುಮಾರು 290 ಮೀಟರ್ ಉದ್ದದ ರೋಪ್ ವೇ ಯೋಜನೆಯ ಬಗ್ಗೆ ಇಲಾಖೆಯಿಂದ ₹ 2.25 ಕೋಟಿ ಪ್ರಸ್ತಾವ ಕಳಿಸಲಾಗಿದೆ. ಕಾಂಕ್ರೀಟ್ ಕಂಬಗಳಿಗೆ ಕಬ್ಬಿಣದ ಹಗ್ಗ ಕಟ್ಟಿ ಅದಕ್ಕೆ ಅಳವಡಿಸುವ ಮೋಟಾರ್ ಕ್ಯಾಬಿನ್‌ನಲ್ಲಿ ಕುಳಿತು ಪ್ರವಾಸಿಗರು ಸುಮಾರು 300 ಅಡಿ ಎತ್ತರದಲ್ಲಿರುವ ಭೈರವೇಶ್ವರ ಶಿಖರ ತಲುಪಬಹುದಾಗಿದೆ. ಸುಮಾರು 10 ಅಡಿ ಅಗಲದ ರೋಪ್ ವೇ ಮಾರ್ಗಕ್ಕೆ ಅಡ್ಡಿಯಾಗುವ ಮರಗಳನ್ನು ಕಡಿಯುವ ಅನಿವಾರ್ಯತೆ ಉಂಟಾಗಬಹುದು. ಕಾಡಿನ ಮಧ್ಯೆ ರೋಪ್ ವೇ ಪ್ರಯಾಣ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡಲಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.