ಭಟ್ಕಳ: ಗಂಭೀರ ಸ್ವರೂಪದ ಕಾಯಿಲೆಗಳು ಕಾಡದಂತೆ ಮುನ್ನೆಚ್ಚರಿಕೆ ರೂಪದಲ್ಲಿ ಮಕ್ಕಳಿಗೆ ಆರೋಗ್ಯ ಇಲಾಖೆಯು ರೋಗ ನಿರೋಧಕ ಲಸಿಕೆಗಳನ್ನು ನೀಡಲು ಸಿದ್ಧವಿದ್ದರೂ ಪಾಲಕರು ಒಪ್ಪುತ್ತಿಲ್ಲ. ಲಸಿಕೆಯಿಂದ ಅಡ್ಡಪರಿಣಾಮ ಬೀರಬಹುದು ಎಂಬ ಆತಂಕ ಪಾಲಕರಲ್ಲಿದ್ದು, ವೈದ್ಯರು ತಿಳಿಹೇಳಿದರೂ ಸ್ಪಂದಿಸುತ್ತಿಲ್ಲ.
‘ಮಕ್ಕಳಲ್ಲಿ ಕಾಡುವ ಡಿಫ್ತೀರಿಯಾ ಪೆರ್ಟುಸಿಸ್ ಮತ್ತು ಟೆಟಾನಸ್ (ಡಿಪಿಟಿ), ಟೆಟಾನಸ್ ಮತ್ತು ವಯಸ್ಕ ಡಿಫ್ತೀರಿಯಾ (ಟಿಡಿ) ಕಾಯಿಲೆ ಬರದಂತೆ 5, 10 ಹಾಗೂ 16ನೇ ವರ್ಷದ ಮಕ್ಕಳಿಗೆ ರೋಗ ನಿರೋಧಕ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಭಟ್ಕಳ ತಾಲ್ಲೂಕಿನಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಕ್ಕಳಿಗೆ ಲಸಿಕೆ ಹಾಕಲು ಸಾಧ್ಯವಾಗಿಲ್ಲ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಡಿಪಿಟಿ ಲಸಿಕೆ ಪಡೆಯಬೇಕಾದ 5 ರಿಂದ 6 ವರ್ಷದ 463 ಮಕ್ಕಳು ತಾಲ್ಲೂಕಿನಲ್ಲಿದ್ದಾರೆ. ಅವರ ಪೈಕಿ 139 ಮಕ್ಕಳು ಮಾತ್ರ ಲಸಿಕೆ ಪಡೆದಿದ್ದಾರೆ. 10 ವರ್ಷದ ಮಕ್ಕಳಿಗೆ ನೀಡುವ ಟಿಡಿ ಲಸಿಕೆ 437 ಹಾಗೂ 16 ವರ್ಷದ ಮಕ್ಕಳಿಗೆ ನೀಡಬೇಕಾದ ಡಿಟಿ ಬೂಸ್ಟರ್ ಡೋಸ್ ಲಸಿಕೆ 598 ಮಕ್ಕಳಿಗೆ ನೀಡಬೇಕಿದ್ದರೂ ಕ್ರಮವಾಗಿ 139, 230 ಮಕ್ಕಳು ಮಾತ್ರ ಪಡೆದಿದ್ದಾರೆ’ ಎಂದು ಅವರು ವಿವರಿಸಿದರು.
ಕೋವಿಡ್ ಹರಡುವ ಅವಧಿಗೂ ಮುನ್ನ ಸ್ವಯಂ ಪ್ರೇರಿತರಾಗಿ ಮಕ್ಕಳಿಗೆ ರೋಗ ನಿರೋಧಕ ಲಸಿಕೆ ಹಾಕಿಸುತ್ತಿದ್ದ ಪಾಲಕರು ಕೋವಿಡ್ ನಂತರದ ದಿನಗಳಲ್ಲಿ ಲಸಿಕೆಗೆ ಭಯಪಡುತ್ತಿದ್ದಾರೆ. ಲಸಿಕೆಯಿಂದ ಮಕ್ಕಳ ಪ್ರಾಣಕ್ಕೆ ಅಪಾಯ ಆಗಬಹುದು ಎಂಬ ಆತಂಕ ಅವರಲ್ಲಿ ಮೂಡಿದೆ.
‘ವಾರ್ಡ್‌ಗಳಲ್ಲಿ ಜನಪ್ರತಿನಿಧಿಗಳ ಮತ್ತು ಮುಖಂಡರ ಸಭೆ ಕರೆದು ಲಸಿಕೆಯ ಮಹತ್ವ ತಿಳಿಸಲಾಗಿದೆ. ಯುನಿಸೆಫ್ ತಂಡವು ಮನೆಮನೆಗೆ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸಿದೆ. ಆದರೆ ಪ್ರಯೋಜನವಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.
ಜನರಲ್ಲಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆ ಹೊರಹಾಕಲು ಪ್ರಯತ್ನಿಸಲಾಗುತ್ತಿದ್ದು ತಿಳಿವಳಿಕೆ ನೀಡುವ ಕೆಲಸ ಆರಂಭಿಸಿದ್ದೇವೆ. ಶಾಲೆಗಳಲ್ಲಿ ಲಸಿಕೆ ನೀಡುವ ಅಭಿಯಾನವೂ ನಡೆದಿದೆಡಾ.ಸವಿತಾ ಕಾಮತ್ ಭಟ್ಕಳ ತಾಲ್ಲೂಕು ಆರೋಗ್ಯಾಧಿಕಾರಿ
ರೋಗ ನಿರೋಧಕ ಲಸಿಕೆ ಪಡೆದ ಕೆಲ ಮಕ್ಕಳಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿದ್ದರಿಂದ ಪಾಲಕರ ಮನಸ್ಸಿನಲ್ಲಿ ಭಯ ಉಂಟಾಗಿದೆ. ಲಸಿಕೆ ಪಡೆದಾಗ ಜ್ವರ ಮೈಕೈನೋವು ಉಂಟಾಗುವುದು ಸಹಜ. ಅದಕ್ಕೆ ಭಯಪಡಬಾರದುರಜಾ ಮಾನ್ವಿ ಭಟ್ಕಳ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.