ADVERTISEMENT

ಶಿರಸಿ: ಕಾಮಗಾರಿಗೆ ಗ್ರಹಣ, ಸವಾರರು ಹೈರಾಣ

ರಾಜೇಂದ್ರ ಹೆಗಡೆ
Published 9 ಜುಲೈ 2025, 4:18 IST
Last Updated 9 ಜುಲೈ 2025, 4:18 IST
   

ಶಿರಸಿ: ‘ಸಾಗರಮಾಲಾ ಯೋಜನೆ’ಯಡಿ ಕೈಗೆತ್ತಿ ಕೊಂಡಿರುವ ಹಾವೇರಿ–ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ–766ಇ ಕಾಮಗಾರಿ ನಿಗದಿತ ಅವಧಿ ಮೀರಿದರೂ ಇನ್ನೂ ಮುಗಿದಿಲ್ಲ. ರಸ್ತೆ ಹದಗೆಟ್ಟಿದ್ದು, ಉತ್ತರ ಕರ್ನಾಟಕದೊಂದಿಗೆ ಮಲೆನಾಡು ಸಂಪರ್ಕ ಕಷ್ಟವಾಗಿದೆ.

ಶಿರಸಿಯಿಂದ ಬೇಲೆಕೇರಿ ಬಂದರಿಗೆ ಸಂಪರ್ಕ ಕಲ್ಪಿಸುವ ಯೋಜನೆಯಡಿ ಮೊದಲ ಹಂತದಲ್ಲಿ ಶಿರಸಿಯಿಂದ ಕುಮಟಾ ತಾಲ್ಲೂಕಿನ ದೀವಗಿವರೆಗೆ ರಸ್ತೆ ನಿರ್ಮಿಸುವ ಕೆಲಸ 2020ರಲ್ಲಿ ಆರಂಭಗೊಂಡಿತ್ತು. 2023ರಲ್ಲಿಯೇ ಮುಗಿಯಬೇಕಿತ್ತು. ಇನ್ನೂ ಮುಗಿದಿಲ್ಲ.

ಈ ರಸ್ತೆಯು ನೀಲೆಕಣಿ ಬಳಿ ಸಂಪೂರ್ಣ ಹಾಳಾಗಿದೆ. ದುಸ್ಥಿತಿಯ ಚಿತ್ರ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ರಸ್ತೆಯ ಕಾಮಗಾರಿ ನಿರ್ವಹಣೆ ಗುತ್ತಿಗೆ ಪಡೆದಿದ್ದ ಆರ್‌ಎನ್ಎಸ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. 

ADVERTISEMENT

ನಗರದ ಮೂಲಕ ಹಾದುಹೋಗುವ ಶಿರಸಿ–ಹಾವೇರಿ ಹೆದ್ದಾರಿ ಕಾಮಗಾರಿ ಯೋಜನೆಯ ಎರಡನೇ ಹಂತದಲ್ಲಿ ಈ ವರ್ಷಾಂತ್ಯಕ್ಕೆ ಪೂರ್ಣ ಗೊಳ್ಳಬೇಕಿದೆ. ಆದರೆ, ಇನ್ನೂ ಕೆಲಸವೇ ಆರಂಭಗೊಂಡಿಲ್ಲ. ಅಮ್ಮಾಪುರ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಕಾಮಗಾರಿಯ ಗುತ್ತಿಗೆ ಪಡೆದಿದೆ.

‘ಶಿರಸಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ಗುಂಡಿಗಳಿವೆ. ಶಿರಸಿ–ಹಾವೇರಿ ನಡುವೆ ವಾಹನ ಸಂಚಾರ ಹೆಚ್ಚಿದೆ. ಸರಕು ಸಾಗಣೆ ವಾಹನ ಸವಾರರು ಇಲ್ಲಿ ಸಾಗಲು ಹಿಂಜರಿಕೆ ಇದೆ. ದುರಸ್ತಿಗೆ ನಿರ್ಲಕ್ಷ್ಯ ತೋರಲಾಗಿದೆ’ ಎಂದು ಸ್ಥಳೀಯರು ತೀವ್ರ ಬೇಸರ ವ್ಯಕ್ತಪಡಿಸಿದರು.

ಹೆದ್ದಾರಿಯಲ್ಲಿ ಹದಗೆಟ್ಟಿರುವ ಕಡೆಗಳಲ್ಲಿ ನಿರ್ವಹಣೆಗೆ ಸೂಚಿಸಲಾಗಿದೆ. ತೀರಾ ಹಾಳಾಗಿರುವ ಕಡೆ ಆದ್ಯತೆ ಮೇರೆಗೆ ದುರಸ್ತಿ ಕಾರ್ಯ ನಡೆಯಲಿದೆ.
ಕೆ.ಶಿವಕುಮಾರ್, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.