ADVERTISEMENT

ಮುಂಡಗೋಡ: ನಿರ್ಲಕ್ಷಗೊಳಗಾದ ಸನವಳ್ಳಿ ದೋಣಿ ವಿಹಾರ ಕೇಂದ್ರ

ಪ್ರವಾಸಿಗರ ನೆಚ್ಚಿನ ತಾಣ ಎನ್ನುವ ಖ್ಯಾತಿಗೊಳಗಾಗಿತ್ತು

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:10 IST
Last Updated 10 ಜನವರಿ 2026, 7:10 IST
ಮುಂಡಗೋಡ ತಾಲ್ಲೂಕಿನ ಸನವಳ್ಳಿ ಜಲಾಶಯದ ದಡಭಾಗದಲ್ಲಿ ದೋಣಿ ವಿಹಾರ ಕೇಂದ್ರ ಹಾಗೂ ಉದ್ಯಾನದಲ್ಲಿರುವ ಪರಿಕರಗಳು ತುಕ್ಕು ಹಿಡಿದು ಜನಬಳಕೆಯಿಂದ ದೂರವಾಗಿವೆ
ಮುಂಡಗೋಡ ತಾಲ್ಲೂಕಿನ ಸನವಳ್ಳಿ ಜಲಾಶಯದ ದಡಭಾಗದಲ್ಲಿ ದೋಣಿ ವಿಹಾರ ಕೇಂದ್ರ ಹಾಗೂ ಉದ್ಯಾನದಲ್ಲಿರುವ ಪರಿಕರಗಳು ತುಕ್ಕು ಹಿಡಿದು ಜನಬಳಕೆಯಿಂದ ದೂರವಾಗಿವೆ   

ಮುಂಡಗೋಡ: ಇಚ್ಛಾಶಕ್ತಿಯ ಕೊರತೆಯಿಂದ ಪ್ರವಾಸಿಗರಿಗೆ ಅನುಕೂಲವಾಗಬೇಕಿದ್ದ ಉದ್ಯಾನ ಹಾಗೂ ದೋಣಿ ವಿಹಾರ ಕೇಂದ್ರ ಅನಾಥ ಸ್ಥಿತಿ ತಲುಪಿದೆ. ತಾಲ್ಲೂಕಿನ ಸನವಳ್ಳಿ ಜಲಾಶಯದ ದಡಭಾಗದಲ್ಲಿರುವ ದೋಣಿ ವಿಹಾರ ಕೇಂದ್ರ ಗಿಡಗಂಟಿಗಳ ಪ್ರದೇಶವಾಗಿದೆ.

ರಾಜ್ಯ ಹೆದ್ದಾರಿಗೆ ತಾಗಿಯೇ ಇರುವ ಹಾಗೂ ಜಲಾಶಯದ ದಡಭಾಗದಲ್ಲಿರುವ ಉದ್ಯಾನವನ್ನು ಕಳೆದ 15 ವರ್ಷಗಳ ಹಿಂದೆ ಉದ್ಘಾಟಿಸಲಾಗಿತ್ತು. ಆರಂಭದ ಕೆಲ ವರ್ಷಗಳವರೆಗೆ ದೋಣಿಗಳು ಜಲಾಶಯದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಿ, ಪ್ರವಾಸಿಗರ ನೆಚ್ಚಿನ ತಾಣ ಎಂಬಂತೆ ಹೆಸರು ಗಳಿಸಿತ್ತು. ಆದರೆ, ಕ್ರಮೇಣವಾಗಿ, ನೀರಿನಲ್ಲಿ ಇರಬೇಕಾಗಿದ್ದ ದೋಣಿಗಳು ದಡಭಾಗದಲ್ಲಿ ಗಿಡಗಂಟಿಗಳ ನಡುವೆ ಆಶ್ರಯ ಪಡೆದುಕೊಂಡವು.

ಇತ್ತ, ಹೂವಿನ ಗಿಡಗಳಿಂದ ಕಂಗೊಳಿಸುತ್ತಿದ್ದ ಉದ್ಯಾನದಲ್ಲಿ, ಗಿಡಗಂಟಿಗಳದ್ದೇ ಕಾರುಬಾರು ಜೋರಾಯಿತು. ಅಷ್ಟರ ಮಟ್ಟಿಗೆ ಉದ್ಯಾನ ನಿರ್ಲಕ್ಷಗೊಳಪಟ್ಟಿತು. ಪ್ರವಾಸಿಗರು ಒತ್ತಾಸೆ ಮಾಡಿದಾಗಲೆಲ್ಲ, ತಕ್ಕ ಮಟ್ಟಿಗೆ ನಿರ್ವಹಣೆ ಮಾಡಿದ ಅರಣ್ಯ ಇಲಾಖೆಯವರು, ದಿನಕಳೆದಂತೆ ಇಲ್ಲೊಂದು ಉದ್ಯಾನವಿದೆ ಎಂಬುದನ್ನೇ ಮರೆತು ಬಿಟ್ಟಿದ್ದಾರೆ ಎಂದು ಸನವಳ್ಳಿ ಗ್ರಾಮಸ್ಥ ರಾಜು ಗುಬ್ಬಕ್ಕನವರ ಆರೋಪಿಸುತ್ತಾರೆ.

ADVERTISEMENT

ʼಈ ಮಾರ್ಗದಲ್ಲಿ ಕಾರವಾರ, ಗೋವಾ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಬಹುತೇಕ ಪ್ರವಾಸಿಗರು, ಸನವಳ್ಳಿ ಜಲಾಶಯ ವೀಕ್ಷಿಸಿ, ಕಣ್ತುಂಬಿಕೊಂಡು ಮುಂದೆ ಸಾಗುತ್ತಾರೆ. ದಡಭಾಗದಲ್ಲಿಯೇ ಇದ್ದಂತ ಉದ್ಯಾನವನ್ನು ನಿರ್ವಹಣೆ ಮಾಡಿದ್ದರೇ ಸಾಕಿತ್ತು. ಪ್ರವಾಸಿಗರಿಗೆ ತುಸು ಹೊತ್ತು ನಿಸರ್ಗದಲ್ಲಿ ಕಾಲ ಕಳೆದು ಮುಂದೆ ಹೋಗಲು ಅನುಕೂಲವಾಗುತ್ತಿತ್ತು. ತುಕ್ಕು ಹಿಡಿದಿರುವ ಆಟಿಕೆ ಪರಿಕರಗಳು, ಮುರಿದು ಬಿದ್ದಿರುವ ಸಿಮೆಂಟ್‌ ಆಸನಗಳು, ಕಾಲಿಡಲು ಆಗದಂತೆ ಗಿಡಗಂಟಿಗಳು ಬೆಳೆದಿರುವುದು, ಇವೆಲ್ಲವನ್ನೂ ನೋಡಿದಾಗ, ಸರ್ಕಾರ ಇಷ್ಟೊಂದು ದುಡ್ಡು ಖರ್ಚು ಮಾಡಿ, ಉದ್ಯಾನವನ್ನು ಆಭಿವೃದ್ಧಿ ಪಡಿಸಿ, ನಿರ್ವಹಣೆ ಮಾಡದಷ್ಟು ಸಂಕಟಕ್ಕೆ ಸಿಲುಕಿದೆಯೇ ಎಂಬ ಪ್ರಶ್ನೆ ಪ್ರವಾಸಿಗರನ್ನು ಕಾಡುತ್ತಿದೆʼ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ ಪ್ರಶ್ನಿಸುತ್ತಾರೆ.

ʼಪಟ್ಟಣದ ಗ್ರಾಮದೇವಿ ಜಾತ್ರೆ ಅಂಗವಾಗಿ, ಇದೇ 13ರಿಂದ ಪಟ್ಟಣವಾಸಿಗಳು ಐದು ಹೊರಬೀಡಿಗಳನ್ನು ಆಚರಿಸುತ್ತಾರೆ. ಈ ದಿನಗಳಂದು ಮನೆಯಿಂದ ಹೊರಗಡೆ ಪ್ರದೇಶದಲ್ಲಿ ಬಿಡಾರ ಹೂಡುವುದು ವಾಡಿಕೆ. ಹೊರಬೀಡು ಸಮಯದಲ್ಲಾದರೂ ಉದ್ಯಾನದಲ್ಲಿ ಜನರು ಇಡಿ ದಿನ ಕುಳಿತುಕೊಂಡು ಹೋಗುವಷ್ಟರ ಮಟ್ಟಿಗಾದರೂ, ಉದ್ಯಾನವನ್ನು ಸ್ವಚ್ಛಗೊಳಿಸಲು ಅರಣ್ಯ ಇಲಾಖೆಯವರು ಮುಂದಾಗಲಿʼ ಎಂದು ಅವರು ಆಗ್ರಹಿಸಿದರು.

ಸನವಳ್ಳಿ ಉದ್ಯಾನ ಹಾಗೂ ದೋಣಿ ವಿಹಾರ ಕೇಂದ್ರದ ಅಭಿವೃದ್ಧಿಗೆ ಅನುದಾನದ ಕೊರತೆಯಿದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು
ಅಪ್ಪಾರಾವ್‌ ಕೆ. ವಲಯ ಅರಣ್ಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.