ADVERTISEMENT

ಭಟ್ಕಳ: ಎಸ್‌ಬಿಐ ಬಜಾರ್‌ ಶಾಖೆ ವಿಲೀನಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 3:07 IST
Last Updated 6 ಆಗಸ್ಟ್ 2025, 3:07 IST
ಎಸ್‌ಬಿಐ ಬಜಾರ್‌ ಶಾಖೆಯನ್ನು ಮುಖ್ಯ ಶಾಖೆಯಲ್ಲಿ ವಿಲೀನ ಮಾಡದಂತೆ ಆಸರಕೇರಿ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಮನವಿ ನೀಡಲಾಯಿತು
ಎಸ್‌ಬಿಐ ಬಜಾರ್‌ ಶಾಖೆಯನ್ನು ಮುಖ್ಯ ಶಾಖೆಯಲ್ಲಿ ವಿಲೀನ ಮಾಡದಂತೆ ಆಸರಕೇರಿ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಮನವಿ ನೀಡಲಾಯಿತು   

ಭಟ್ಕಳ: ಭಾರತೀಯ ಸ್ಟೇಟ್ ಬ್ಯಾಂಕ್‌ನ ಬಜಾರ್‌ ಶಾಖೆಯನ್ನು ಮುಖ್ಯ ಶಾಖೆಯೊಂದಿಗೆ ವಿಲೀನ ಮಾಡದಂತೆ ಆಗ್ರಹಿಸಿ ಭುವನೇಶ್ವರಿ ಕನ್ನಡ ಸಂಘ ಹಾಗೂ ಡಬ್ಲೂಎಚ್ಆರ್‌ಕೆಆರ್‌ಕೆ ಫೌಂಡೇಶನ್‌ ವತಿಯಿಂದ ಮಂಗಳವಾರ ಸ್ಟೇಟ್ ಬ್ಯಾಂಕಿನ ಬಝಾರ ಶಾಖೆಯ ಶಾಖಾ ವ್ಯವಸ್ಥಾಪಕ ಕೆ.ಎಂ. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕರು ಹಾಗೂ ಅನೇಕ ಸಂಘ–ಸಂಸ್ಥೆಗಳು ಭಟ್ಕಳ ಸ್ಟೇಟ್ ಬ್ಯಾಂಕ್‌ ಬಜಾರ್‌ ಶಾಖೆಯಲ್ಲಿ ತುಂಬಾ ವರ್ಷಗಳಿಂದ ಬ್ಯಾಂಕ್‌ ಖಾತೆ ಹೊಂದಿದ್ದೇವೆ. ಆದರೆ ಭಟ್ಕಳ ಬಜಾರ್‌ ಶಾಖೆಯನ್ನು ಭಟ್ಕಳ ಮುಖ್ಯ ಶಾಖೆಯೊಂದಿಗೆ ವಿಲೀನಗೊಳಿಸಲಾಗುತ್ತದೆ ಎಂದು ಸೂಚನಾ ಫಲಕವನ್ನು ಬಜಾರ್‌ ಶಾಖೆಯಲ್ಲಿ ಹಾಕಲಾಗಿದೆ. ಇದಕ್ಕೆ ಖಾತೆದಾರರ ವಿರೋಧವಿದೆ. ಮುಖ್ಯ ಶಾಖೆಗೆ ಬಜಾರ ಶಾಖೆಯು ವಿಲೀನಗೊಂಡಲ್ಲಿ ಹಲವು ಸಮಸ್ಯೆಗಳೂ ಎದುರಾಗಲಿದೆ. ಮುಖ್ಯ ಶಾಖೆಯಲ್ಲಿ ಬ್ಯಾಂಕಿನ ಖಾತೆದಾರರ ಜನಸಂದಣಿ ಹೆಚ್ಚಾಗುತ್ತಿರುವುದರಿಂದ ಗ್ರಾಹಕರು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಬರಬಹುದು. ಮುಖ್ಯ ಶಾಖೆಯ ಹತ್ತಿರ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಖಾತೆ ಹೊಂದಿರುವ ವೃದ್ಧರು, ಮಹಿಳೆಯರಿಗೆ ವಾಹನದಲ್ಲಿ ಬರಲು ತೊಂದರೆಯಾಗುತ್ತದೆ. ಹೀಗಾಗಿ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಆಸರಕೇರಿ ಭುವನೇಶ್ವರಿ ಕನ್ನಡ ಸಂಘದ ಅದ್ಯಕ್ಷ ಅಣ್ಣಪ್ಪ ನಾಯ್ಕ, ಎಚ್.ಆರ್.ಕೆ.ಆರ್.ಕೆ. ಫೌ'ಡೇಶನ್‌ ವಿಶ್ವ ಮಾನವ ಹಕ್ಕು ಭಟ್ಕಳ ಘಟಕದ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಮುಖರಾದ ಈಶ್ವರ ನಾಯ್ಕ, ಚಂದ್ರು ನಾಯ್ಕ, ಜಯಶಂಕರ ನಾಯ್ಕ, ದೀಲೀಪ ನಾಯ್ಕ, ಮೋಹನ ನಾಯ್ಕ, ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.