ADVERTISEMENT

ಉತ್ತರ ಕನ್ನಡ:14 ವರ್ಷದಲ್ಲಿ ಪರಿಶಿಷ್ಟ ಜಾತಿ ಜನರ ಸಂಖ್ಯೆ 5 ಸಾವಿರವಷ್ಟೇ ಹೆಚ್ಚಳ?

45 ದಿನಗಳ ಕಾಲ ನಡೆದಿದ್ದ ಸಮೀಕ್ಷೆ: ಪರಿಶಿಷ್ಟ ಜಾತಿ ಕುಟುಂಬಗಳ ಸಂಖ್ಯೆ ಏರಿಕೆ

ಗಣಪತಿ ಹೆಗಡೆ
Published 24 ಜುಲೈ 2025, 2:53 IST
Last Updated 24 ಜುಲೈ 2025, 2:53 IST
ಪರಿಶಿಷ್ಟ ಜಾತಿ ಜನರ ಸಮೀಕ್ಷೆಗೆ ದಾಂಡೇಲಿಯಲ್ಲಿ ಗಣತಿದಾರರು ಮನೆ ಮನೆ ಭೇಟಿ ನೀಡಿದ್ದರು (ಸಂಗ್ರಹ ಚಿತ್ರ)
ಪರಿಶಿಷ್ಟ ಜಾತಿ ಜನರ ಸಮೀಕ್ಷೆಗೆ ದಾಂಡೇಲಿಯಲ್ಲಿ ಗಣತಿದಾರರು ಮನೆ ಮನೆ ಭೇಟಿ ನೀಡಿದ್ದರು (ಸಂಗ್ರಹ ಚಿತ್ರ)   

ಕಾರವಾರ: ಜಿಲ್ಲೆಯಲ್ಲಿ ಕಳೆದ 14 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಜನರ ಸಂಖ್ಯೆ ಕೇವಲ 5 ಸಾವಿರದಷ್ಟು ಏರಿಕೆಯಾಗಿದೆ! ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಪರಿಶಿಷ್ಟ ಜಾತಿಯ ನಿಖರ ಜನಸಂಖ್ಯೆ ಮತ್ತು ಅವರ ಸ್ಥಿತಿಗತಿ ಅರಿಯಲು ನಡೆದಿದ್ದ ಸಮೀಕ್ಷೆಯಲ್ಲಿ ಈ ಮಾಹಿತಿ ಗೊತ್ತಾಗಿದೆ.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ಏಕ ಸದಸ್ಯ ಆಯೋಗದ ನಿರ್ದೇಶನದ ಮೇರೆಗೆ ಮೇ 5 ರಿಂದ ಜೂನ್ 30ರ ವರೆಗೆ ಜಿಲ್ಲೆಯಾದ್ಯಂತ ಪರಿಶಿಷ್ಟ ಜಾತಿ ಜನರ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಆರಂಭದ ಒಂದು ತಿಂಗಳವರೆಗೆ ಮನೆ ಮನೆ ಭೇಟಿ ಮೂಲಕ ಶಿಕ್ಷಕರು ಸಮೀಕ್ಷೆ ಕಾರ್ಯ ನಡೆಸಿದ್ದರು.

ಎರಡನೇ ಹಂತದಲ್ಲಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಗುಂಪು ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಬಿಟ್ಟುಹೋದವರಿಗೆ ಮಾಹಿತಿ ನೀಡಲು ಕರ್ನಾಟಕ್ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು.

ADVERTISEMENT

ಪರಿಶಿಷ್ಟ ಜಾತಿ ಜನರ ಮಾಹಿತಿ ಮಾತ್ರ ದಾಖಲಿಸಬೇಕಿದ್ದರೂ ಅವರ ಹುಡುಕಾಟಕ್ಕೆ ಜಿಲ್ಲೆಯಲ್ಲಿನ 3 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಭೇಟಿಯಾಗಿ ಸಮೀಕ್ಷೆ ಕೈಗೊಂಡಿದ್ದ ಶಿಕ್ಷಕರು ಮಾಹಿತಿ ಸಂಗ್ರಹಿಸಿದ್ದರು.

‘2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 26,617 ಪರಿಶಿಷ್ಟ ಜಾತಿ ಕುಟುಂಬಗಳಿದ್ದು, ಜನಸಂಖ್ಯೆ ಆಗ 1,16,431 ರಷ್ಟು ಇತ್ತು. ಸಮೀಕ್ಷೆ ಕಾರ್ಯ ಕೈಗೊಳ್ಳುವಾಗಿನ ಹಿಂದಿನ ಗಣತಿ ಮಾಹಿತಿ ಆಧರಿಸಿ 1,16,781 ಜನರ ಸಮೀಕ್ಷೆ ಕೈಗೊಳ್ಳುವ ಗುರಿಯನ್ನು ನೀಡಲಾಗಿತ್ತು. ಸಮೀಕ್ಷೆ ಪೂರ್ಣಗೊಳ್ಳುವ ದಿನದ ಬೆಳಿಗ್ಗೆವರೆಗೆ (ಜೂ.30) 1,21,580 ಪರಿಶಿಷ್ಟ ಜಾತಿ ಜನರ ಮಾಹಿತಿ ಸಲ್ಲಿಕೆಯಾಗಿದೆ. 30,303 ಕುಟುಂಬಗಳು ಸಮೀಕ್ಷೆಗೆ ಒಳಪಟ್ಟಿದ್ದವು. ಇದು ಒಟ್ಟಾರೆ ಗುರಿ ಮೀರಿ ಶೇ 104ರಷ್ಟು ಸಮೀಕ್ಷೆ ನಡೆಸಿದಂತಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಕೆ.ಉಮೇಶ್ ತಿಳಿಸಿದರು.

ಜಿಲ್ಲೆಯಲ್ಲಿ ಹಿಂದಿನ ಗಣತಿ ವರದಿ ಆಧರಿಸಿ ನೀಡಿದ್ದ ಗುರಿ ಮೀರಿ ಶೇ 104ರಷ್ಟು ಸಾಧನೆ ಮಾಡಲಾಗಿದೆ. ಆದರೆ ಆಯೋಗವು ಅಧಿಕೃತವಾಗಿ ವರದಿ ಬಿಡುಗಡೆ ಮಾಡಿದ ಬಳಿಕವೇ ನಿಖರ ಸಂಖ್ಯೆ ಗೊತ್ತಾಗಲಿದೆ
ವೈ.ಕೆ.ಉಮೇಶ್ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ

ಮುಂಡಗೋಡದಲ್ಲಿ ಹೆಚ್ಚು

‘ಪರಿಶಿಷ್ಟ ಜಾತಿ ಜನರ ಸಮೀಕ್ಷೆಯ ವೇಳೆ ದಾಖಲಾದ ಮಾಹಿತಿ ಆಧರಿಸಿ ಹೇಳುವುದಾದರೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಜನರಿದ್ದಾರೆ ಎಂಬುದು ಗೊತ್ತಾಗಿದೆ. ಈ ಕ್ಷೇತ್ರ ವ್ಯಾಪ್ತಿಯ ಮುಂಡಗೋಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಜನರಿದ್ದಾರೆ. ಭಟ್ಕಳ ಮತ್ತು ಹಳಿಯಾಳದಲ್ಲಿಯೂ ಪರಿಶಿಷ್ಟ ಜಾತಿ ಜನಸಂಖ್ಯೆ 20 ಸಾವಿರಕ್ಕಿಂತ ಹೆಚ್ಚಿದೆ. ಕುಮಟಾ ಕ್ಷೇತ್ರದಲ್ಲಿ ಕೇವಲ 13 ಸಾವಿರದಷ್ಟು ಪರಿಶಿಷ್ಟ ಜಾತಿ ಜನರಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.