ಹೊನ್ನಾವರ: ಪಶ್ಚಿಮ ಘಟ್ಟದಲ್ಲಿ ಕೊರೆಯಲಾಗುವ ಸುರಂಗ ಮಾರ್ಗದಿಂದ ಮೇಲಕ್ಕೆತ್ತುವ ಶರಾವತಿ ನದಿ ನೀರನ್ನು ಉಪಯೋಗಿಸಿ ವಿದ್ಯುತ್ ಉತ್ಪಾದನೆ ಮಾಡುವ ‘ಶರಾವತಿ ಭೂಗತ ವಿದ್ಯುತ್ ಯೋಜನೆ’ (ಪಂಪ್ಡ್ ಸ್ಟೋರೇಜ್) ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ತಾಲ್ಲೂಕಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಶರಾವತಿ ಕೊಳ್ಳ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಯೋಜನೆ ವಿರೋಧಿಸಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಹೋರಾಟಕ್ಕೆ ಯುವಕರು ಪ್ರವೇಶ ಮಾಡಿರುವುದು ಹೋರಾಟದ ಕಿಚ್ಚು ಹೆಚ್ಚಿಸಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತಾಲ್ಲೂಕು ಹಾಗೂ ಜಿಲ್ಲೆಯ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟ ಬೆಂಬಲಿಸಿ ಹೇಳಿಕೆ ನೀಡುತ್ತಿದ್ದಾರೆ. ಯುವಕರು ಗುಂಪು ಕಟ್ಟಿಕೊಂಡು ಶಾಲೆ, ಕಾಲೇಜುಗಳಿಗೆ ತೆರಳಿ ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದ ಮೇಲಾಗುವ ಹಾನಿಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ.
‘ಯುವಕರು ತಮ್ಮ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಂಡಿರುವುದರಿಂದ ಸಾಮಾಜದ ಎಲ್ಲ ಸ್ತರಗಳ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಸಾಧ್ಯವಾಗಿದೆ. ಸೆ.18ರಂದು ಬೆಳಿಗ್ಗೆ ಗೇರುಸೊಪ್ಪದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹೆಚ್ಚು ಜನರು ಭಾಗವಹಿಸಿ ಯೋಜನೆಗೆ ತಮ್ಮ ವಿರೋಧವನ್ನು ದಾಖಲಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಲು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೊನ್ನಾವರ ಫೌಂಡೇಷನ್ ಅಧ್ಯಕ್ಷ ಸಂದೀಪ ಹೆಗಡೆ ಹೇಳಿದರು.
ಯೋಜನೆಯನ್ನು ಜಾರಿಗೊಳಿಸುತ್ತಿರುವ ಕರ್ನಾಟಕ ವಿದ್ಯುತ್ ನಿಗಮ ನಿಮಿತ (ಕೆಪಿಸಿಎಲ್) ಭೂಗತ ವಿದ್ಯುತ್ ಯೋಜನೆಯಿಂದ ಹಾನಿಗಿಂತ ಲಾಭವೇ ಹೆಚ್ಚು ಎಂದು ಸಮರ್ಥಿಸಿಕೊಂಡಿದೆ. ಆದರೆ, ಕೆಪಿಸಿಎಲ್ ವಾದಕ್ಕೆ ಶರಾವತಿ ಎಡ ಹಾಗೂ ಬಲ ದಂಡೆಗಳ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
‘ಉಪ್ಪೋಣಿ ಹಾಗೂ ಹೆರಂಗಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಯೋಜನೆ ವಿರೋಧಿಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಗೇರುಸೊಪ್ಪದಲ್ಲಿ ಭಾನುವಾರ ನಡೆದ ಸರ್ವ ಪಕ್ಷ ಸಭೆಯಲ್ಲೂ ಒಕ್ಕೊರಲಿನಿಂದ ಯೋಜನೆ ಜಾರಿಯನ್ನು ಖಂಡಿಸಲಾಗಿದೆ’ ಎಂದು ಶರಾವತಿ ಕೊಳ್ಳ ರಕ್ಷಣಾ ಸಮಿತಿಯ ಚಂದ್ರಕಾಂತ ಕೊಚರೇಕರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.