
ಕಾರವಾರ: ಮಹಾ ಶಿವರಾತ್ರಿ ಮುಗಿದ ಎರಡು ದಿನದ ಬಳಿಕ ತಾಲ್ಲೂಕಿನ ಮಾಜಾಳಿಯಲ್ಲಿ ಮಂಗಳವಾರ ರಾಮನಾಥ ದೇವರ ಸಾವಿರಾರು ಭಕ್ತರು ಸಮುದ್ರ ಸ್ನಾನ ಮಾಡಿದರು.
ಶಿವರಾತ್ರಿ ಅಮಾವಾಸ್ಯೆ ಅಂಗವಾಗಿ ಪ್ರತಿ ವರ್ಷ ಸಮುದ್ರ ಸ್ನಾನ ಮಾಡಿ, ಪೂರ್ವಜರಿಗೆ ಕಡಲತೀರದಲ್ಲಿ ಪಿಂಡ ಪ್ರದಾನ ಮಾಡುವದು ಸ್ಥಳೀಯ ವಾಡಿಕೆ. ಈ ಬಾರಿಯೂ ಕಡಲತೀರದಲ್ಲಿ ಜನಜಂಗುಳಿ ಉಂಟಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಮಾಜಾಳಿಯ ನೆಚಕಿನಬಾಗದಿಂದ ದೇವಬಾಗದವರೆಗೆ ಸುಮಾರು ಎರಡು ಕಿ.ಮೀ ಉದ್ದದ ಕಡಲತೀರದಲ್ಲಿ ಜನದಟ್ಟಣೆ ಕಂಡುಬಂತು.
ರಾಂನಾಥ ದೇವರ ಪರಿವಾರ ದೇವರುಗಳನ್ನು ಕಡಲತೀರಕ್ಕೆ ಕರೆತಂದು, ಪೂಜೆ ಸಲ್ಲಿಸಿ ಸಮುದ್ರ ಸ್ನಾನ ಮಾಡಿಸುವ ಸಂಪ್ರದಾಯ ನೆರವೇರಿತು. ಮಾಜಾಳಿಯ ರಾಮನಾಥ ದೇವಾಲಯ, ಚಿತ್ತಾಕುಲದ ಮಹಾಮ್ಮಾಯಾ ದೇವಾಲಯ, ಕೊಳಗೆಯ ವಿಠೋಬ, ದೇವಬಾಗದ ನರಸಿಂಹ, ಮುಡಗೇರಿ, ಹೊಸಾಳಿ ಹಾಗೂ ಅಸ್ನೋಟಿಯ ಶಿವನಾಥ ದೇವಾಲಯ ಸೇರಿದಂತೆ ಪರಿವಾರ ದೇವರುಗಳ ಉತ್ಸವಮೂರ್ತಿಯನ್ನು ಪಲ್ಲಕ್ಕಿ ಮೂಲಕ ಮೆರವಣಿಗೆಯಲ್ಲಿ ಕಡಲತೀರಕ್ಕೆ ಕರೆತರಲಾಯಿತು. ಇಲ್ಲಿ ಪೂಜಿಸಿದ ಬಳಿಕ ಪುನಃ ಆಯಾ ಗ್ರಾಮದ ವ್ಯಾಪ್ತಿಯ ಮನೆಗಳ ಎದುರು ಪೂಜೆ ಸಲ್ಲಿಸಲಾಯಿತು. ಕಡಲತೀರದಲ್ಲಿ ಭಕ್ತರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿದರು.
ಕಡಲತೀರದಲ್ಲಿ ಮರಳಿನ ಶಿವಲಿಂಗಗಳನ್ನು ರಚಿಸಿ ಅದಕ್ಕೆ ಪೂಜಿಸಿದರು. ಪುಣ್ಯ ಸ್ನಾನ ಮಾಡಿ ಮನೆಗೆ ಮರಳುವ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಹಾಸಿಟ್ಟ ಸೀರೆಯಲ್ಲಿ ಪಡಿ ಬೀರುತ್ತ ಸಾಗಿದರು. ರಾಮನಾಥ ದೇವರು ಹಾಗೂ ಇತರ ಆರು ಪರಿವಾರ ದೇವರನ್ನು ಛತ್ರ, ಚಾಮರ, ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿಯಲ್ಲಿ ಸಾಲು ಸಾಲಾಗಿ ಕರೆತಂದು ಕಡಲತೀರದಲ್ಲಿ ಪೂಜಿಸುವುದು ಆಚರಣೆಯ ವಿಶೇಷಗಳಲ್ಲಿ ಒಂದೆನಿಸಿದೆ.
‘ಶಿವರಾತ್ರಿ ಅಮವಾಸ್ಯೆ ದಿನ ಅಗಲಿದ ಪೂರ್ವಜರಿಗೆ ಕಡಲತೀರದಲ್ಲಿ ಪಿಂಡ ಪ್ರದಾನ ಮಾಡಿದರೆ ದೋಷವು ಕಳೆದು, ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ’ ಎಂದು ಸ್ಥಳೀಯರಾದ ರಘುನಾಥ ಸಾವಂತ ಹೇಳಿದರು.
ಸಮುದ್ರದಲ್ಲಿ ಬಿದ್ದು ಬಾಲಕ ಸಾವು
ಶಿವರಾತ್ರಿ ಅಮವಾಸ್ಯೆ ಅಂಗವಾಗಿ ಕಾರವಾರ ತಾಲ್ಲೂಕಿನ ಬಾವಳ ಸಮೀಪ ಸಮುದ್ರ ಸ್ನಾನ ಮಾಡುತ್ತಿದ್ದ ವೇಳೆ ಆಯತಪ್ಪಿ ನೀರಿನಲ್ಲಿ ಮುಳುಗಿ ಮಾಜಾಳಿ ಗಾಂವಗೇರಿಯ ಯಶ್ ಶ್ಯಾಮ ಮಹಾಲೆ (17) ಮೃತಪಟ್ಟಿದ್ದಾನೆ. ‘ನೂರಾರು ಜನರು ಸಮುದ್ರ ಸ್ನಾನ ಮಾಡುತ್ತಿದ್ದರು. ಈ ವೇಳೆ ಆಯತಪ್ಪಿ ಮುಳುಗಿದ ಬಾಲಕ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದ. ಬಾಲಕನನ್ನು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದ’ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.