
ಶಿರಸಿ: ಈ ಬಾರಿ ಶುಂಠಿ ದರ ಏರಿಕೆಯಾಗಿರುವುದು ಬೆಳೆಗಾರರ ಪಾಲಿಗೆ ಸಮಾಧಾನ ತಂದಿದ್ದರೂ ಬೆಳೆ ಮಾತ್ರ ಮಣ್ಣು ಪಾಲಾಗುತ್ತಿದೆ. ಬನವಾಸಿ ಹೋಬಳಿಯಲ್ಲಿ ಶುಂಠಿಗೆ ಕಾಣಿಸಿಕೊಂಡಿದ್ದ ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗದಿಂದಾಗಿ ಶೇ 50ರಷ್ಟು ಇಳುವರಿ ಕುಂಠಿತವಾಗಿದೆ ಎಂಬುದು ರೈತರ ದೂರು.
ಬನವಾಸಿ ಹೋಬಳಿಯ ಸುಮಾರು 250 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಶುಂಠಿ ಕಟಾವು ಕಾರ್ಯ ಇದೀಗ ಭರದಿಂದ ಸಾಗಬೇಕಿತ್ತು. ಆದರೆ, ಗದ್ದೆಗೆ ಇಳಿದ ರೈತರಿಗೆ ನಿರಾಸೆ ಉಂಟಾಗಿದೆ. ಭೂಮಿಯಿಂದ ಗಡ್ಡೆಗಳನ್ನು ಹೊರತೆಗೆಯುತ್ತಿದ್ದಂತೆ ರೈತರು ಆಘಾತಕ್ಕೊಳಗಾಗುತ್ತಿದ್ದಾರೆ. ಮೇಲ್ನೋಟಕ್ಕೆ ಆರೋಗ್ಯವಾಗಿ ಕಂಡ ಗಿಡಗಳ ಕೆಳಗೆ ಗಡ್ಡೆಗಳು ಕೊಳೆತು ಹೋಗಿವೆ. ಹಲವು ಕಡೆ ಗಡ್ಡೆಗಳು ಬಲಿತೇ ಇಲ್ಲ. ಇದು ರೈತರ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿಗೊಳಿಸಿದೆ.
‘ಈ ಬಾರಿ ಕಟಾವಿನ ಹಂತದಲ್ಲಿ ಇಳುವರಿಯು ಅರ್ಧದಷ್ಟು ಕುಂಠಿತಗೊಂಡಿದೆ. ಕಳೆದ ವರ್ಷ ಪ್ರತಿ ಎಕರೆಗೆ ಸರಾಸರಿ 150 ರಿಂದ 180 ಚೀಲ ಇಳುವರಿ ಪಡೆದಿದ್ದೆವು. ಈ ಬಾರಿ ಕೇವಲ 70 ರಿಂದ 90 ಚೀಲ ಇಳುವರಿ ಸಿಕ್ಕಿದೆ. ಎಲೆಚುಕ್ಕಿ ಬಾಧೆ ನಿಯಂತ್ರಣಕ್ಕೆ ಅತಿಯಾದ ಔಷಧಿ ಸಿಂಪಡಣೆಯು ಮಾರಕವಾಗಿ ಪರಿಣಮಿಸಿದೆ. ಜತೆ, ಗಡ್ಡೆ ಕೊಳೆ ರೋಗದಿಂದಾಗಿ ಬೆಳೆ ಮಣ್ಣಿನಲ್ಲೇ ಕರಗಿ ಹೋಗಿದೆ. ಇದರಿಂದಾಗಿ ಪ್ರತಿ ಎಕರೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ’ ಎನ್ನುತ್ತಾರೆ ಶುಂಠಿ ಬೆಳೆಗಾರ ನವೀನ ನಾಯ್ಕ.
‘ಕಟಾವು ಮಾಡಿದ ಅಲ್ಪಸ್ವಲ್ಪ ಶುಂಠಿಯೂ ಸಹ ಗುಣಮಟ್ಟದಿಂದ ಕೂಡಿಲ್ಲ. ಗಡ್ಡೆಗಳಲ್ಲಿ ತಿರುಳು ಇಲ್ಲದೆ ಪೊಳ್ಳಾಗುತ್ತಿರುವುದು ಮತ್ತು ರೋಗದ ಬಾಧೆಯಿಂದಾಗಿ ಗಡ್ಡೆಗಳು ಸಪ್ಪೆ ಇರುವುದು, ತೂಕದಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದೆ’ ಎನ್ನುತ್ತಾರೆ ಅವರು.
‘ಮಾರುಕಟ್ಟೆಯಲ್ಲಿ ಈಗ ಕ್ವಿಂಟಲ್ ಹಸಿ ಶುಂಠಿಗೆ ₹5 ಸಾವಿರ ಧಾರಣೆ ಇದೆ. ಕಳೆದ ವರ್ಷ ಈ ಸಮಯದಲ್ಲಿ ₹4 ಸಾವಿರ ಧಾರಣೆ ಇತ್ತು. ಆದರೆ ಈ ವರ್ಷ ಮಾರಾಟ ಮಾಡಲು ನಮ್ಮ ಬಳಿ ಬೆಳೆಯೇ ಇಲ್ಲದಂತಾಗಿದೆ. ಕಟಾವು ಮಾಡಿದ ಮೇಲೆ ಸಿಗುತ್ತಿರುವ ಇಳುವರಿ ನೋಡಿದರೆ ಕಟಾವು ಮಾಡಲು ತಗಲುವ ಕೂಲಿ ವೆಚ್ಚವೂ ಸಿಗುತ್ತಿಲ್ಲ’ ಎಂದು ರೈತರು ಹತಾಶೆ ವ್ಯಕ್ತಪಡಿಸಿದರು.
ಅತಿಯಾದ ಎಲೆಚುಕ್ಕಿ ರೋಗ ಬಾಧೆಯು ಪತ್ರ ಹರಿತ್ತಿನ ಮೇಲೆ ಪರಿಣಾಮ ಬೀರಿದ ಕಾರಣ ಶುಂಠಿ ಗಡ್ಡೆ ತೂಕದಲ್ಲಿ ಹೋಗಿದೆ. ಗುಣಮಟ್ಟವೂ ಇಳಿಕೆಯಾಗಿದೆ.– ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಅಧಿಕಾರಿ
ಸಮೀಕ್ಷೆ ನಡೆಸಿ ಪರಿಹಾರ ನೀಡಿ
‘ಬನವಾಸಿ ಭಾಗದ ಶುಂಠಿ ಬೆಳೆಗಾರರು ಸಂಕಷ್ಟದ ಸುಳಿಯಲ್ಲಿದ್ದಾರೆ. ಕಟಾವಿನ ನಿರ್ಣಾಯಕ ಸಮಯದಲ್ಲಿ ರೈತರು ಎದುರಿಸುತ್ತಿರುವ ಆಘಾತವನ್ನು ಪರಿಗಣಿಸಿ ತೋಟಗಾರಿಕಾ ಇಲಾಖೆಯು ತಕ್ಷಣವೇ ಇಳುವರಿ ಕುಸಿತದ ಸಮೀಕ್ಷೆ ನಡೆಸಬೇಕು. ಶೇ 50ರಷ್ಟು ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪರಿಹಾರ ವಿತರಿಸಬೇಕು ಹಾಗೂ ಮುಂದಿನ ಹಂಗಾಮಿಗೆ ನೆರವಾಗಲು ಬೀಜೋಪಚಾರ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಬೇಕು’ ಎಂಬುದು ಶುಂಠಿ ಬೆಳೆಗಾರರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.