ADVERTISEMENT

ಪ್ರವಾಹ: ಶಾಶ್ವತ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ; ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 14:16 IST
Last Updated 2 ಆಗಸ್ಟ್ 2021, 14:16 IST
ಕಾರವಾರ ತಾಲ್ಲೂಕಿನ ಕದ್ರಾಕ್ಕೆ ಸೋಮವಾರ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂತ್ರಸ್ತರ ಅಹವಾಲು ಆಲಿಸಿದರು. ಶಾಸಕ ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮುಖಂಡ ಸತೀಶ ಸೈಲ್ ಇದ್ದಾರೆ
ಕಾರವಾರ ತಾಲ್ಲೂಕಿನ ಕದ್ರಾಕ್ಕೆ ಸೋಮವಾರ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂತ್ರಸ್ತರ ಅಹವಾಲು ಆಲಿಸಿದರು. ಶಾಸಕ ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮುಖಂಡ ಸತೀಶ ಸೈಲ್ ಇದ್ದಾರೆ   

ಕಾರವಾರ: ‘ಕದ್ರಾ, ಮಲ್ಲಾಪುರ ಭಾಗದಲ್ಲಿ ಜಲಾಶಯದ ನೀರಿನಿಂದ ಉಂಟಾದ ಪ್ರವಾಹದಲ್ಲಿ ಸಂತ್ರಸ್ತರಾದವರನ್ನು ಸ್ಥಳಾಂತರಿಸುವ ಮೂಲಕ ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳಬೇಕು. ಈ ಬಗ್ಗೆ ಸರ್ಕಾರದ ಮೇಲೆ ಸದನದಲ್ಲಿ ಒತ್ತಡ ಹೇರಲಾಗುವುದು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.

ಎರಡೂ ಗ್ರಾಮಗಳಿಗೆ ಸೋಮವಾರ ತೆರಳಿ, ಹಾನಿಗೀಡಾದ ಪ್ರದೇಶಗಳನ್ನು ಅವರು ವೀಕ್ಷಿಸಿದರು. ಇದೇ ವೇಳೆ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು.

ಕದ್ರಾದಲ್ಲಿ ಸಂತ್ರಸ್ತರು ಹಾಗೂ ವಿವಿಧ ಅಧಿಕಾರಿಗಳ ಜೊತೆ ಚರ್ಚಿಸಿದ ಅವರು, ‘ಜಲಾಶಯದಿಂದ ನದಿಗೆ ನೀರು ಹರಿಸುವಾಗ ಸಾಕಷ್ಟು ಮುನ್ಸೂಚನೆ ನೀಡಿಲ್ಲ ಎಂಬುದು ಎಲ್ಲರ ದೂರಾಗಿದೆ. ಇದು ಬಡವರ ಜೀವನದ ಪ್ರಶ್ನೆಯಲ್ವಾ’ ಎಂದು ಕಂದಾಯ ಮತ್ತು ಕರ್ನಾಟಕ ವಿದ್ಯುತ್ ನಿಗಮದ (ಕೆ.ಪಿ.ಸಿ) ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಪಿ.ಸಿ ಎಂಜಿನಿಯರ್‌, ‘ಪ್ರಕಟಣೆ ನೀಡಿಯೇ ನದಿಗೆ ನೀರು ಹರಿಸಲಾಗಿದೆ. ಸುಮಾರು ಎರಡು ಗಂಟೆಗಳ ಅಂತರ ತೆಗೆದುಕೊಳ್ಳಲಾಗಿದೆ. ಅದೂ ಅಲ್ಲದೇ ಜಲಾಶಯದ ಗೇಟ್‌ಗಳನ್ನು ರಾತ್ರಿ ತೆರೆದಿಲ್ಲ. ಪ್ರವಾಹವಾಗಲು ಜೂನ್ 22ರಂದು ರಾತ್ರಿ ಸುರಿದ ಭಾರಿ ಮಳೆ ಕಾರಣ’ ಎಂದು ಹೇಳಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘2019ರಲ್ಲಿ ನೆರೆ ಬಂದಿತ್ತು. ಅದರ ಹಿನ್ನೆಲೆಯಲ್ಲಿ ನೀವು ಮತ್ತಷ್ಟು ಎಚ್ಚರಿಕೆ ವಹಿಸಬೇಕಿತ್ತು. ನೀವೇನೇ ಸಮಜಾಯಿಷಿ ಕೊಟ್ಟರೂ ಸರಿಯಾಗದು. ಕೆ.ಪಿ.ಸಿ ಸುಪರ್ದಿಯಲ್ಲಿರುವ ಬಳಕೆಯಾಗದ ವಸತಿ ಸಮುಚ್ಚಯಗಳನ್ನು ಸಂತ್ರಸ್ತರಿಗೆ ಕೊಡಿ. ಜಿ ಪ್ಲಸ್ 1 ಅಥವಾ ಜಿ ಪ್ಲಸ್ 2 ಸಮುಚ್ಚಯಗಳನ್ನು ನಿರ್ಮಿಸಲು ಸಮಸ್ಯೆಯೇನು? ಈ ಬಗ್ಗೆ ಕೆ.ಪಿ.ಸಿ ವ್ಯಸ್ಥಾಪಕ ನಿರ್ದೇಶಕರ ಜೊತೆ ಮಾತನಾಡುತ್ತೇನೆ’ ಎಂದರು.

ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ‘ನನ್ನದೂ ಇವರದ್ದು (ಕದ್ರಾ– ಮಲ್ಲಾಪುರ ಗ್ರಾಮಸ್ಥರು) 30–35 ವರ್ಷಗಳ ಸಂಬಂಧ. ಯಾರನ್ನೂ ಮನೆ ಖಾಲಿ ಮಾಡಿಸುವುದಾಗಲೀ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಲೀ ಮಾಡಬೇಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಲ್ಲಾಪುರದಲ್ಲಿ ಅಹವಾಲು ಆಲಿಸಿದ ಸಿದ್ದರಾಮಯ್ಯ, ‘ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಾರ್ಯದ ಬಗ್ಗೆ ಈ ಹಿಂದೆಯೇ ಸರ್ಕಾರದ ಗಮನ ಸೆಳೆದಿದ್ದೇನೆ. ಈ ಬಾರಿ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ನಮ್ಮ ಸರ್ಕಾರ ಇದ್ದಿದ್ದರೆ ಸ್ಥಳಾಂತರದಂಥ ಶಾಶ್ವತ ಪರಿಹಾರ ಕಾರ್ಯ ಮಾಡುತ್ತಿತ್ತು’ ಎಂದರು.

ಗ್ರಾಮ ಪಂಚಾಯಿತಿಗಳ ಪದಾಧಿಕಾರಿಗಳು, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ್ ನಿಶ್ಚಲ್ ನರೋನಾ, ವಿವಿಧ ಅಧಿಕಾರಿಗಳು ಇದ್ದರು.

‘ಸರ್ಕಾರವೇ ಸಂಪೂರ್ಣ ಭ್ರಷ್ಟ’
‘ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಬಿ.ಜೆ.ಪಿ.ಯ ಹಲವು ನಾಯಕರು ತಮ್ಮ ವಿರುದ‌್ಧ ಸಿ.ಡಿ ಬಿಡುಗಡೆ ಮಾಡದಂತೆ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಅವರೆಲ್ಲ ಯಾವುದೋ ಹಗರಣದಲ್ಲಿ ಇದ್ದಾರೆ ಎಂದೇ ಅರ್ಥ’ ಎಂದು ಸಿದ್ದರಾಮಯ್ಯ ಆರೋಪಿಸಿದರು.

ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿ.ಜೆ.ಪಿ ಸರ್ಕಾರವೇ ಸಂಪೂರ್ಣ ಭ್ರಷ್ಟವಾಗಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ಕೆಳಗಿಳಿಸಿದರು’ ಎಂದು ಪ್ರಶ್ನಿಸಿದರು.

ಭಾನುವಾರ ರಾತ್ರಿ ನಗರಕ್ಕೆ ಬಂದ ಅವರು, ಸೋಮವಾರ ಮುಂಜಾನೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ವಾಯು ವಿವಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.