ADVERTISEMENT

ಶಿರಸಿ, ಸ್ಥಳೀಯ ವಿಶೇಷ ಖಾದ್ಯ ತೊಡೆದೇವು ಮೆಚ್ಚಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 9:39 IST
Last Updated 25 ಸೆಪ್ಟೆಂಬರ್ 2020, 9:39 IST
10 ವರ್ಷದ ಹಿಂದೆ ಶಿರಸಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ
10 ವರ್ಷದ ಹಿಂದೆ ಶಿರಸಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ   

ಶಿರಸಿ: ಹತ್ತು ವರ್ಷಗಳ ಹಿಂದೆ ಶಿರಸಿಗೆ ಬಂದಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಶಿರಸಿಯ ಪರಿಸರ, ಇಲ್ಲಿ ಸವಿದ ತೊಡೆದೇವಿನ ರುಚಿಯನ್ನು ಹಲವು ದಿನಗಳವರೆಗೆ ಮೆಲಕು ಹಾಕಿದ್ದರು.

ರಂಗಕರ್ಮಿ ರಮಾನಂದ ಐನಕೈ ಮತ್ತು ಸ್ನೇಹಿತರ ಬಳಗ ಕಟ್ಟಿದ್ದ ಜೀವನ್ಮುಖಿ ಎಂಬ ಸಂಸ್ಥೆಯನ್ನು ಉದ್ಘಾಟಿಸಲು 2009ರ ಮಾರ್ಚ್ 13 ರಂದು ಬಾಲಸುಬ್ರಹ್ಮಣ್ಯಂ ನಗರಕ್ಕೆ ಬಂದಿದ್ದರು. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆ ಉದ್ಘಾಟಿಸಿದ ಬಳಿಕ ‘ಗಾನ ಸಂಭ್ರಮ’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

ಎರಡು ಗಂಟೆಗಳ ಕಾಲ ನಿರಂತರವಾಗಿ ಗಾನಸುಧೆ ಹರಿಸಿದ್ದ ಎಸ್ಪಿಬಿ 19 ಕನ್ನಡ ಹಾಡುಗಳನ್ನು ಹಾಡಿದ್ದರು. ಅವರಿಗೆ ಸಹಗಾಯಕಿಯರಾದ ಅರ್ಚನಾ ಉಡುಪ, ಎಂ.ಡಿ. ಪಲ್ಲವಿ ಸಾಥ್ ಕೊಟ್ಟಿದ್ದರು.

ADVERTISEMENT

‘ಅಂದಿನ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಅಂದು ವಿಪರೀತ ಮಳೆ ಸುರಿದಿತ್ತು. ಇಲ್ಲದಿದ್ದರೆ ಜಿಲ್ಲೆಯಲ್ಲೇ ಅತಿ ಹೆಚ್ಚು ಜನ ಸೇರಿದ್ದ ಕಾರ್ಯಕ್ರಮ ಇದಾಗಬಹುದಿತ್ತು’ ಎಂದು ರಮಾನಂದ ಐನಕೈ ಹೇಳಿದರು. ‘ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಎಸ್ಪಿಬಿ ಮಾರಿಕಾಂಬಾ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಐನಕೈ ಗ್ರಾಮದಲ್ಲಿರುವ ನಮ್ಮ ಮನೆಗೂ ಬಂದಿದ್ದರು. ಅಲ್ಲಿ ಸ್ಥಳೀಯ ವಿಶೇಷ ಖಾದ್ಯ ತೊಡೆದೇವು ಸವಿದು ಖುಷಿಪಟ್ಟಿದ್ದರು. ಚೆನ್ನೈಗೆ ಮರಳಿದ ನಂತರ ದೂರವಾಣಿ ಕರೆ ಮಾಡಿ ಶಿರಸಿಯ ಜನ, ತೊಡೆದೇವು ಎಲ್ಲವೂ ನನಗಿಷ್ಟವಾದವು ಎಂದಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.