
ಶಿರಸಿ: ಎಲೆಚುಕ್ಕಿ ರೋಗ, ಕೊಳೆರೋಗ ಹಾಗೂ ಹವಾಮಾನ ವೈಪರೀತ್ಯದ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದ ರೈತರಿಗೆ, ಇದೀಗ ಅಕಾಲಿಕ ಮಳೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಚಾಲಿ ಅಡಿಕೆ ಒಣಗಿಸುವ ಪ್ರಕ್ರಿಯೆ ಭರದಿಂದ ಸಾಗಿದ್ದು, ಎರಡು ದಿನಗಳಿಂದ ಸಂಜೆ ವೇಳೆಗೆ ಅನಿರೀಕ್ಷಿತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ.
‘ಚಾಲಿ ಅಡಿಕೆಯನ್ನು ಕನಿಷ್ಠ 45 ದಿನಗಳ ಕಾಲ ಪ್ರಖರ ಬಿಸಿಲಿನಲ್ಲಿ ಒಣಗಿಸಬೇಕಾಗುತ್ತದೆ. ಆದರೆ, ಈಗ ನಿತ್ಯವೂ ಮೋಡ ಕವಿದ ವಾತಾವರಣ ಇರುವುದು ಹಾಗೂ ಸಂಜೆಯಾಗುತ್ತಿದ್ದಂತೆ ಮಳೆ ಸುರಿಯುತ್ತಿರುವುದು ಅಡಿಕೆಯ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ಬೆಳೆಗಾರರು.
‘ಚಾಲಿ ಅಡಿಕೆ ಇನ್ನೇನು ಒಣಗಿ ಮನೆಯೊಳಗೆ ಸೇರಿಸಬೇಕು ಎಂಬ ಹಂತದಲ್ಲಿ ಮಳೆಗೆ ಸಿಲುಕಿದೆ. ನಿತ್ಯವೂ ಮೋಡದ ವಾತಾವರಣ ಇರುವುದರಿಂದ ಅಡಿಕೆ ಸರಿಯಾಗಿ ಒಣಗುತ್ತಿಲ್ಲ. ಹೀಗಾದರೆ ಅಡಿಕೆಗೆ ಶಿಲೀಂದ್ರ ಬಂದು ಅದರ ಗುಣಮಟ್ಟ ಸಂಪೂರ್ಣವಾಗಿ ಹಾಳಾಗುತ್ತದೆ. ಅಡಿಕೆ ಒದ್ದೆಯಾದಂತೆಲ್ಲಾ ಅದರ ಬಣ್ಣ ಕೆಡುತ್ತದೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುವುದು ಕಷ್ಟವಾಗುತ್ತದೆ. ಸಂಜೆ ವೇಳೆಗೆ ಮಳೆಯಾಗುತ್ತಿದೆ, ಒಣಗಲು ಸರಿಯಾದ ಬಿಸಿಲು ಸಿಗುತ್ತಿಲ್ಲ. ಪದೇ ಪದೇ ತಾಡಪತ್ರಿ ಮುಚ್ಚಿ ಅಡಿಕೆಯನ್ನು ಸಂರಕ್ಷಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ’ ಎಂದು ಕೃಷಿಕ ರಾಜಾರಾಮ ಹೆಗಡೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.