ಶಿರಸಿ: ಕ್ಯಾನ್ಸರ್ ಬಗ್ಗೆ ತಪ್ಪು ಕಲ್ಪನೆಗಳನ್ನು ಮಾಡಿಕೊಂಡು ತಪಾಸಣೆ ಮಾಡಿಕೊಳ್ಳದವರಿಗೆ ಸೂಕ್ತ ತಿಳಿವಳಿಕೆ ನೀಡುವ ಕೆಲಸ ಆಶಾ ಕಾರ್ಯಕರ್ತೆಯರು ಹೆಚ್ಚು ಹೆಚ್ಚು ಮಾಡಬೇಕು ಎಂದು ತಾಲ್ಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ಮಧುಕರ ಪಾಟೀಲ ಹೇಳಿದರು.
ನಗರದ ಭಾರತ ಸೇವಾದಳ ಸಭಾಂಗಣದಲ್ಲಿ ಬುಧವಾರ ಅಸ್ಮಿತೆ ಫೌಂಡೇಶನ್ ಅವರು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಜನಸಾಮಾನ್ಯರ ಆರೋಗ್ಯ ಸುಧಾರಣೆ ತರಲು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಅಸ್ಮಿತೆ ಫೌಂಡೇಶನ್ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಅಸ್ಮಿತೆ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಪ್ರಾಸ್ತಾವಿಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ತಪಾಸಣೆ ಶಿಬಿರ ಆಯೋಜಿಸುತ್ತಿದ್ದು, ಅದಕ್ಕೆ ಪೂರಕವಾಗಿ ಆಶಾ ಕಾರ್ಯಕರ್ತೆಯರ ಈ ತರಬೇತಿ ಆಯೋಜಿಸಲಾಗಿದೆ ಎಂದರು.
ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕಲಬುರ್ಗಿ ಪ್ರಾದೇಶಿಕದ ಗುರುರಾಜ್ ಕುಲಕರ್ಣಿ ಅವರು ಕ್ಯಾನ್ಸರ್ ತಪಾಸಣಾ ಅವಶ್ಯಕತೆ, ನಿರ್ಲಕ್ಷ್ಯದಿಂದ ಆಗುವ ದುಷ್ಪರಿಣಾಮ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಉತ್ತರ ಕನ್ನಡ ಸಂಯೋಜಕಿ ರೋಹಿಣಿ ಸೈಲ್, ಅಸ್ಮಿತೆ ಫೌಂಡೇಶನ್ ಕಾರ್ಯಕ್ರಮ ಸಂಯೋಜಕಿ ವಿದ್ಯಾ ಗಾಂವ್ಕರ, ಇಲಾಖೆಯ ಮಹೇಶ ನಾಯಕ, ರೂಪ ನಾಯ್ಕ ಉಪಸ್ಥಿತರಿದ್ದರು. 60ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ತರಬೇತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.