ADVERTISEMENT

ಬಿಜೆಪಿ ಶಾಸಕರ ಅಮಾನತು | ಸ್ಪೀಕರ್‌ ನಿರ್ಧಾರ ಆಘಾತಕಾರಿ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 15:58 IST
Last Updated 22 ಮಾರ್ಚ್ 2025, 15:58 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಶಿರಸಿ: ‘ಬಿಜೆಪಿಯ 18 ಶಾಸಕರನ್ನು ಸದನದಿಂದ ಅಮಾನತು ಮಾಡಿದ ವಿಧಾನಸಭೆ ಅಧ್ಯಕ್ಷರ ನಿರ್ಧಾರ ಆಘಾತಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ ಆಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. 

‘ಮಧುಬಲೆ ಪ್ರಕರಣಕ್ಕೆ ತನಿಖೆಗೆ ಆಗ್ರಹಿಸಿ ವಿರೋಧಪಕ್ಷದವರ ಧರಣಿಯು ನ್ಯಾಯಸಮ್ಮತವಾಗಿದ್ದು, ಅವರ ಹಕ್ಕು ಕೂಡ ಆಗಿತ್ತು. ಆದರೆ, ಮುಖ್ಯಮಂತ್ರಿಯವರ ಅಣತಿಯಂತೆ ವಿಧಾನಸಭೆ ಅಧ್ಯಕ್ಷರು, ಸದಸ್ಯರನ್ನು ಸದನದಿಂದ 6 ತಿಂಗಳು ಅಮಾನತು ಮಾಡಿದ್ದು ದುರದೃಷ್ಟಕರ’ ಎಂದು ಅವರು ತಿಳಿಸಿದ್ದಾರೆ. 

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ವಿರೋಧ ಪಕ್ಷದ ಶಾಸಕರ ಮೇಲೆ ದಮನಕಾರಿ ನೀತಿ ನಡೆದಿದೆ. ಸದಸ್ಯರ ಹಕ್ಕು ಮತ್ತು ಅವರ ಹಿತವನ್ನು ಕಾಪಾಡಬೇಕಿದ್ದ ವಿಧಾನಸಭೆ ಅಧ್ಯಕ್ಷ ಯು.ಟಿ ಖಾದರ್ ಅವರು ಮುಖ್ಯಮಂತ್ರಿ ಮತ್ತು ಕಾನೂನು ಸಚಿವರ ಒತ್ತಡಕ್ಕೆ ಮಣಿದು, ಅತಿರೇಕದ ನಿರ್ಣಯ ಕೈಗೊಂಡು ಪ್ರಜಾಪ್ರಭುತ್ವದ ಹತ್ಯೆ ಎಸಗಿದ್ದಾರೆ. ನಿರ್ಧಾರ ಪುನರ್ ಪರಿಶೀಲಿಸಿ, ಅಮಾನತು ಆದೇಶ ಹಿಂಪಡೆಯಬೇಕು’ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. 

ADVERTISEMENT

‘ಅಮಾನತು ಮಾಡಬಾರದಿತ್ತು’

ಮಂಗಳೂರು: ‘ವಿಧಾನಸಭಾ ಅಧಿವೇಶನದ ಕಲಾಪದ ವೇಳೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಶಾಸಕರನ್ನು ಆರು ತಿಂಗಳು ಅಮಾನತು ಮಾಡಬಾರದಿತ್ತು’ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಶನಿವಾರ ಇಲ್ಲಿ ಹೇಳಿದರು.

‘ಶಾಸಕರ ವರ್ತನೆಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಅವರು ತಪ್ಪು ಮಾಡಿದ್ದರೆ, ಎರಡು ಮೂರು ದಿನಗಳ ಮಟ್ಟಿಗೆ ಅಥವಾ ಒಂದು ಅಧಿವೇಶನದ ಅವಧಿಗೆ ಅವರನ್ನು ಅಮಾನತು ಮಾಡಲಿ. ಅಧಿಕಾರದ ಮದದಿಂದ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ವಿರೋಧ ಪಕ್ಷದವರನ್ನು ಯಾವತ್ತೂ ಈ ರೀತಿ ನಡೆಸಿಕೊಂಡಿಲ್ಲ. ಈ ಹಿಂದೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಸದನದಲ್ಲಿ ತೊಡೆ ತಟ್ಟಿದ್ದರು. ಬಾಯಿಗೆ ಬಂದಂತೆ ಮಾತನಾಡಿದ್ದರು. ಬಾಗಿಲಿಗೆ ಒದ್ದು ಒಳಗೆ ಬಂದಿದ್ದರು.‌ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಸಭಾಪತಿಯನ್ನೇ ಎಳೆದಾಡಿದ್ದರು.‌ ಆಗ ಕಾಂಗ್ರೆಸ್‌ ಸದಸ್ಯರನ್ನು ಶಾಶ್ವತವಾಗಿ ವಜಾ ಮಾಡಬಹುದಿತ್ತು. ಆದರೂ ಆಗ ಆ ರೀತಿ ಮಾಡಿರಲಿಲ್ಲ’ ಎಂದರು. 

‘ಇಂಥ ಗಲಾಟೆ ನೋಡಿರಲಿಲ್ಲ’

ಮೈಸೂರು: ‘40 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಗಲಾಟೆ ನೋಡಿರಲಿಲ್ಲ. ಸಂಸದೀಯ ಭಾಷೆಯೇ ಬಳಕೆಯಾಗಲಿಲ್ಲ. ಪ್ರಜಾಪ್ರಭುತ್ವದ ಆಶಯಗಳನ್ನು ಬಿಜೆಪಿ ಗಾಳಿಗೆ ತೂರಿದೆ. ಅಮಾನತು ಮಾಡದೇ ಸ್ಪೀಕರ್‌ಗೆ ಬೇರೆ ದಾರಿ ಇರಲಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಶನಿವಾರ ಪ್ರತಿಕ್ರಿಯಿಸಿದ್ದಾರೆ.  ‘ಸಿದ್ದರಾಮಯ್ಯನವರ ದೈಹಿಕ–ರಾಜಕೀಯ ಆರೋಗ್ಯ ಬಹಳ ಚೆನ್ನಾಗಿದ್ದು ಮುಂದಿನ 3 ಬಜೆಟ್‌ಗಳನ್ನೂ ಮಂಡಿಸುತ್ತಾರೆ. ಅನುಮಾನ ಬೇಡ. ‌ಸಿ.ಎಂ ಬದಲಾವಣೆ ಬಗ್ಗೆ ಮಾತನಾಡುವ ಬಿಜೆಪಿಯವರು ಪಕ್ಷವನ್ನು ಶಿಸ್ತಾಗಿಟ್ಟುಕೊಳ್ಳಲಿ’ ಎಂದು ಹೇಳಿದರು. 

ಈ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆ.ಬಜೆಟ್ ಮೇಲಿನ ಉತ್ತರಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸಿವೆ. ಇದೊಂದು ಪೂರ್ವಯೋಜಿತ ಪಿತೂರಿ
ಕೆ.ಎನ್‌.ರಾಜಣ್ಣ , ಸಹಕಾರ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.