ADVERTISEMENT

ಶಿರಸಿ | ಕಾಳುಮೆಣಸು, ಶುಂಠಿ ಅಭಿವೃದ್ಧಿಗೆ ‘ಕ್ಲಸ್ಟರ್’: ತೋಟಗಾರಿಕಾ ಇಲಾಖೆ

ರಾಜೇಂದ್ರ ಹೆಗಡೆ
Published 10 ಡಿಸೆಂಬರ್ 2025, 4:37 IST
Last Updated 10 ಡಿಸೆಂಬರ್ 2025, 4:37 IST
ಕಾಳುಮೆಣಸು (ಪ್ರಾತಿನಿಧಿಕ)
ಕಾಳುಮೆಣಸು (ಪ್ರಾತಿನಿಧಿಕ)   

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಕಾಳುಮೆಣಸು ಮತ್ತು ಶುಂಠಿ ಬೆಳೆಗಳು ಕೇಂದ್ರ ಸರ್ಕಾರದ ಕ್ಲಸ್ಟರ್ ಅಭಿವೃದ್ಧಿ ಯೋಜನೆಯ ಪಟ್ಟಿಗೆ ಸೇರಿದ್ದು, ಯೋಜನಾ ವೆಚ್ಚದ ಶೇ 20ರಷ್ಟು ಬಂಡವಾಳ ಹೂಡುವ ಹಾಗೂ ಸಂಸ್ಕರಣೆ, ರಫ್ತು, ವ್ಯಾಪಾರದಲ್ಲಿ ಅನುಭವ ಹೊಂದಿರುವ ರೈತರು, ಸಂಘಸಂಸ್ಥೆಗಳಿಗೆ ಯೋಜನೆ ಅನುಷ್ಠಾನಕ್ಕೆ ಅವಕಾಶವಿದೆ. 

ತೋಟಗಾರಿಕಾ ವಲಯವನ್ನು ಬಲಪಡಿಸಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ‘ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ’ (ಸಿಡಿಪಿ) ಯೋಜನೆ ಅನುಷ್ಠಾನಗೊಳಿಸುತ್ತಿದೆ. ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ (ಕ್ಲಸ್ಟರ್) ಪ್ರಧಾನವಾಗಿ ಬೆಳೆಯುವ ಹಣ್ಣು, ತರಕಾರಿ, ಹೂವು ಅಥವಾ ಸಾಂಬಾರ ಪದಾರ್ಥಗಳಂತಹ ತೋಟಗಾರಿಕಾ ಬೆಳೆಗಳನ್ನು ಗುರುತಿಸಿ, ಅಂಥ ಗುರುತಿಸಿದ ಬೆಳೆಯ ಸರ್ವಾಂಗೀಣ ಅಭಿವೃದ್ಧಿಗೆ ಬೆಂಬಲ ನೀಡುವುದು ಯೋಜನೆತ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಶುಂಠಿ ಹಾಗೂ ಕಾಳುಮೆಣಸು ಈ ಯೋಜನೆಗೆ ಒಳಪಟ್ಟಿವೆ. ಜಿಲ್ಲೆಯಲ್ಲಿ ಕಾಳುಮೆಣಸು ಅಂದಾಜು 10–15 ಸಾವಿರ ಹೆಕ್ಟೇರ್ ಹಾಗೂ ಶುಂಠಿ 1,200 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. 

‘ರೈತರಿಗೆ ಕೇವಲ ಸಣ್ಣಪುಟ್ಟ ಸಹಾಯಧನ ನೀಡುವುದಕ್ಕಿಂತ ಹೆಚ್ಚಾಗಿ, ಈ ಯೋಜನೆಯು ಬೆಳೆಯ ಸಂಪೂರ್ಣ ಮೌಲ್ಯ ಸರಪಳಿಯನ್ನು ಬಲಪಡಿಸಲು ಗಮನಹರಿಸುತ್ತದೆ. ರೈತರಿಗೆ ಗುಣಮಟ್ಟದ ರೋಗ ನಿರೋಧಕ ಸಸಿಗಳನ್ನು ಒದಗಿಸುವುದು, ಮಣ್ಣು ಪರೀಕ್ಷೆಯ ಆಧಾರದ ಮೇಲೆ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸುವುದು, ಉತ್ತಮ ಕೃಷಿ ಪದ್ಧತಿ ಮತ್ತು ಸಾವಯವ ಕೃಷಿ ಬಗ್ಗೆ ತರಬೇತಿ ನೀಡುವುದು, ಬೆಳೆ ಕೊಯ್ಲಿನ ನಂತರ ಆಗುವ ನಷ್ಟ ತಡೆಯುವುದು, ಇದಕ್ಕಾಗಿ ಆಧುನಿಕ ಸಂಸ್ಕರಣಾ ಘಟಕಗಳು, ಶೈತ್ಯಾಗಾರಗಳು, ವೈಜ್ಞಾನಿಕ ಒಣಗಿಸುವ ವ್ಯವಸ್ಥೆಗಳನ್ನು ಸ್ಥಾಪಿಸಲು ಆರ್ಥಿಕ ನೆರವು ನೀಡುವುದು, ಕ್ಲಸ್ಟರ್‌ನ ಉತ್ಪನ್ನಕ್ಕೆ ಒಂದು ವಿಶಿಷ್ಟವಾದ ‘ಬ್ರ‍್ಯಾಂಡ್’ ರಚಿಸುವುದು, ಆಕರ್ಷಕ ಮತ್ತು ಸುರಕ್ಷಿತ ಪ್ಯಾಕೇಜಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸುವುದು, ಗ್ರಾಹಕರ ವಿಶ್ವಾಸಕ್ಕೆ ಕ್ಯೂಆರ್ ಕೋಡ್ ಅಳವಡಿಸುವುದು’ ಯೋಜನೆಯಲ್ಲಿ ಸೇರಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿ ಸತೀಶ ಹೆಗಡೆ. 

ADVERTISEMENT

‘ಯೋಜನೆಯನ್ನು ಅನುಷ್ಠಾನಗೊಳಿಸಲು ಕೇವಲ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೇ, ಖಾಸಗಿ ವಲಯದವರಿಗೂ ಅವಕಾಶವಿದೆ. ರೈತ ಉತ್ಪಾದಕ ಸಂಸ್ಥೆಗಳು ಮತ್ತು ಅವುಗಳ ಒಕ್ಕೂಟಗಳು, ಪಾಲುದಾರಿಕೆ ಅಥವಾ ಏಕ ಮಾಲಕತ್ವದ ಸಂಸ್ಥೆಗಳು, ಕಂಪನಿಗಳು, ರಾಜ್ಯ-ಕೇಂದ್ರ ಸರ್ಕಾರಗಳ ಸಾರ್ವಜನಿಕ ವಲಯದ ಘಟಕಗಳು ಇದರ ಲಾಭ ಪಡೆಯಬಹುದಾಗಿದೆ. ಈ ಸಂಸ್ಥೆಗಳು ಯೋಜನಾ ವೆಚ್ಚದ ಕನಿಷ್ಠ ಶೇ. 20ರಷ್ಟು ಸ್ವಂತ ಬಂಡವಾಳವನ್ನು ಹೂಡಿಕೆ ಮಾಡಬೇಕು ಮತ್ತು ಸಂಬಂಧಿತ ಕೃಷಿ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು’ ಎನ್ನುತ್ತಾರೆ ಅವರು. 

‘ಯೋಜನೆಯು ರೈತರನ್ನು ಕೇವಲ ಕಚ್ಚಾ ವಸ್ತುಗಳ ಬೆಳೆಗಾರರಾಗಿ ಉಳಿಸದೇ, ಅವರನ್ನು ಮೌಲ್ಯವರ್ಧಿತ ಉತ್ಪನ್ನಗಳ ಮಾಲೀಕರನ್ನಾಗಿ ಮಾಡಲು ಸಹಾಯ ಮಾಡುತ್ತದೆ. ರೈತ ಉತ್ಪಾದಕ ಸಂಸ್ಥೆಗಳು ಮತ್ತು ಸಹಕಾರ ಸಂಘಗಳ ಮೂಲಕ ಈ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿಕೊಂಡು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಬಹುದು. ಜಿಲ್ಲೆಯಲ್ಲಿ ಕಾಳುಮೆಣಸು ಹಾಗೂ ಶುಂಠಿ ಉತ್ತಮವಾಗಿ ಬೆಳೆಯುತ್ತಿದ್ದು, ಯೋಜನೆಯ ಅನುಷ್ಠಾನದಿಂದ ಇನ್ನಷ್ಟು ಸಹಕಾರಿಯಾಗಲಿದೆ’ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾತು.

ಕ್ಲಸ್ಟರ್ ಅಭಿವೃದ್ಧಿ ಯೋಜನೆಯಲ್ಲಿ ಕಾಳುಮೆಣಸು ಹಾಗೂ ಶುಂಠಿ ಬೆಳೆ ಪ್ರೋತ್ಸಾಹಿಸಲಾಗುತ್ತದೆ. ಇದಕ್ಕೆ ಅನುದಾನದ ನಿರ್ಬಂಧವಿಲ್ಲ. ₹25 ಕೋಟಿ ಮೇಲ್ಪಟ್ಟು ವಹಿವಾಟು ಇದ್ದರೆ ಯೋಜನೆ ಅನುಮೋದನೆಯಾಗಲಿದೆ
ಸತೀಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ
ಯೋಜನೆಯಲ್ಲಿ ಮಾರ್ಪಾಡು ಮಾಡಲು ಒತ್ತಾಯ 
ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಒಳಪಡಬೇಕಾದರೆ ಕನಿಷ್ಠ ₹25 ಕೋಟಿ ವ್ಯವಹಾರ ನಡೆಸಬೇಕೆಂಬ ನಿಯಮವನ್ನು ರಾಷ್ಟ್ರೀಯ ತೋಟಗಾರಿಕಾ ಇಲಾಖೆ ರೂಪಿಸಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಚಿಕ್ಕ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ರಾಜ್ಯ ತೋಟಗಾರಿಕಾ ಇಲಾಖೆಯ ಅಡಿಗೆ ತಂದು ಪ್ರತಿ ರೈತರು ಹಾಗೂ ಸಹಕಾರ ಸಂಘಸಂಸ್ಥೆಗಳು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಜಿಲ್ಲೆಯ ಸಂಸದರು ಮನವಿ ಸಲ್ಲಿಸಿ ಯೋಜನೆಯಲ್ಲಿ ಮಾರ್ಪಾಡು ಮಾಡಬೇಕೆಂಬ ಒತ್ತಾಯ ರೈತರಿಂದ ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.