ಶಿರಸಿ: ನಗರ ಪ್ರದೇಶದ ಶಾಲಾ ವಲಯದಲ್ಲಿನ ರಸ್ತೆಯ ಪಕ್ಕ ಪಾದಚಾರಿ ಮಾರ್ಗ ಇರುವುದು ಕಡ್ಡಾಯ. ಆದರೆ ಸಾವಿರಾರು ವಿದ್ಯಾರ್ಥಿಗಳಿರುವ ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಇಲ್ಲದೆ, ಆತಂಕದಲ್ಲಿ ಸಂಚರಿಸುವಂತಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ನಗರದ ಪಂಡಿತ್ ಸರ್ಕಾರಿ ಆಸ್ಪತ್ರೆ ಎದುರಿನಿಂದ ಯಲ್ಲಾಪುರ ನಾಕಾವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಿ, ದ್ವಿಪಥ ರಸ್ತೆಯನ್ನಾಗಿ ಮಾಡಲಾಗಿದೆ. ಬಹುತೇಕ ಕಡೆ ರಸ್ತೆ ಕಾಮಗಾರಿಯೂ ಸಹ ಮುಗಿದಿದೆ.
ಆದರೆ, ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಶಾಲೆಯೆಂಬ ಹೆಗ್ಗಳಿಕೆ ಹೊಂದಿದ ಮಾರಿಕಾಂಬಾ ಪ್ರೌಢಶಾಲೆ ಹಾಗೂ ಕಾಲೇಜ್ ಎದುರಿಗಿರುವ ಪಾದಚಾರಿ ಮಾರ್ಗ ತೆರವುಗೊಳಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ರಸ್ತೆ ದಾಟುವ ವೇಳೆ ಅಪಘಾತಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾಗಿದೆ.
‘ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಹಾಗೂ ಶಾಲೆಯಿಂದ ಮನೆಗೆ ಹೋಗುವಾಗ ಈ ರಸ್ತೆಯಲ್ಲಿ ಅತಿಯಾಗಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಸಮಯದಲ್ಲಿ ವಾಹನ ಸಂಚಾರವೂ ಹೆಚ್ಚು. ಶಾಲಾ ಆವರಣದಿಂದ ಮನೆಗೆ ತೆರಳಲು ನೇರವಾಗಿ ಹೆದ್ದಾರಿಗೇ ಹೋಗಬೇಕು. ವೇಗವಾಗಿ ಬರವು ವಾಹನಗಳಿಂದ ಅಪಘಾತಗಳಾಗುತ್ತಿವೆ’ ಎನ್ನುತ್ತಾರೆ ವಿದ್ಯಾರ್ಥಿಗಳು.
‘ಈ ಮೊದಲು ಮಾರಿಕಾಂಬಾ ಕಾಲೇಜ್‍ನಿಂದ ರಾಘವೇಂದ್ರ ವೃತ್ತದವರೆಗೆ ವಿಶಾಲವಾದ ಪಾದಚಾರಿ ಮಾರ್ಗ ಇತ್ತು. ಈಗ ಯಾವುದೇ ಪಾದಚಾರಿ ಮಾರ್ಗ ಇಲ್ಲದ ಕಾರಣ ಅಪಘಾತದ ಭಯ ಎದುರಾಗಿದೆ’ ಎಂದೂ ಸಮಸ್ಯೆ ಹೇಳಿಕೊಂಡರು.
‘ರಸ್ತೆಯುದ್ದಕ್ಕೂ ಶಾಲೆ, ಕಾಲೇಜ್, ಕೋರ್ಟ್ ಹಾಗೂ ಸರ್ಕಾರಿ ಕಚೇರಿಗಳಿವೆ. ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಓಡಾಡುತ್ತಾರೆ. ರಸ್ತೆ ವಿಸ್ತರಣೆ ಆದರೂ ಇಲ್ಲಿ ವಾಹನ ದಟ್ಟಣೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಮೊದಲಿನಂತೆ ಅಗಲವಾದ ಪಾದಚಾರಿ ಮಾರ್ಗ ನಿರ್ಮಿಸಿದರೆ ಪಾದಚಾರಿಗಳ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿ ಪಾಲಕಿ ಸುಲೋಚನಾ ನಾಯ್ಕ.
ಮಾರಿಕಾಂಬಾ ಶಾಲೆಯೆದುರು ಪಾದಚಾರಿ ಮಾರ್ಗ ನಿರ್ಮಿಸಲು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅಗತ್ಯ ಕ್ರಮಕೈಗೊಳ್ಳಲಿದ್ದಾರೆ.–ಭೀಮಣ್ಣ ನಾಯ್ಕ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.