ADVERTISEMENT

ಪಠ್ಯದಲ್ಲಿನ ತಪ್ಪು ಅಂಶ ತೆಗೆಯುತ್ತೇವೆ: ಸಚಿವ ಮಧು

ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:34 IST
Last Updated 4 ಜೂನ್ 2023, 16:34 IST
ಮಧು ಬಂಗಾರಪ್ಪ 
ಮಧು ಬಂಗಾರಪ್ಪ    

ಶಿರಸಿ: ‘ಮಕ್ಕಳನ್ನು ತಪ್ಪುದಾರಿಗೆ ಕೊಂಡೊಯ್ಯುವ ಅಂಶಗಳನ್ನು ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪಠ್ಯದಿಂದ ತೆಗೆಯಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 

ಭಾನುವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಕೆಲವು ತಪ್ಪು ಮಾಹಿತಿಗಳು ಸೇರ್ಪಡೆಯಾಗಿವೆ. ಅಂಥ ಅಂಶಗಳನ್ನು ತೆಗೆದು ಪೂರಕ ಮಾಹಿತಿ ಒಳಗೊಂಡ ವಿಷಯವಾರು ಪುಸ್ತಕಗಳನ್ನು ಮುಂದಿನ 10 ದಿನದಲ್ಲಿ ಸಿದ್ಧ ಮಾಡುತ್ತೇವೆ. ಮುಖ್ಯಮಂತ್ರಿ ಮಾರ್ಗದರ್ಶನದಲ್ಲಿಯೇ ಈ ಪರಿಷ್ಕರಣೆ ಕೈಗೊಳ್ಳುತ್ತೇವೆ’ ಎಂದರು.

‘ಇಲಾಖೆಯ ವ್ಯಾಪ್ತಿಯಲ್ಲಿ 1.20 ಕೋಟಿ ಮಕ್ಕಳಿದ್ದಾರೆ. ಮೂರು ಲಕ್ಷ ಶಿಕ್ಷಕರಿದ್ದಾರೆ. ಶಿಕ್ಷಕರ ಕೊರತೆ, ಮೂಲ ಸೌಲಭ್ಯ ಕೊರತೆ ನೀಗಿಸುತ್ತೇವೆ. ಶಾಲೆಗಳಲ್ಲಿ ಕೊರತೆ ಇರುವ 8,500 ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಕ್ರಮ ಕೈಗೊಳ್ಳಲು ಇಲಾಖೆಗೆ ಸೂಚನೆ ನೀಡಿದ್ದೇವೆ’ ಎಂದ ಅವರು, ‘ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕದಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ಇನ್ನೆರಡು ತಿಂಗಳಲ್ಲಿ ಸಮಿತಿ ರಚನೆ ಮಾಡಿ ಕ್ರಮಕ್ಕೆ ಸಿದ್ಧತೆ ನಡೆಸುತ್ತೇವೆ’ ಎಂದು ತಿಳಿಸಿದರು. 

ADVERTISEMENT

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲಿಂದ ಅನುದಾನ ನೀಡುತ್ತಾರೆ ಎಂಬ ಆತಂಕ ಬೇಡ. ಸ್ವಲ್ಪ ಹೊರೆಯಾಗುತ್ತದೆ. ಸೊರಿಕೆ ಆಗುವುದನ್ನು ತಡೆಗಟ್ಟುವ ಮೂಲಕ ಇದನ್ನು ನಿಭಾಯಿಸುವ ಶಕ್ತಿ ಸರ್ಕಾರಕ್ಕಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.  ವಿಶ್ವಾಸ ವ್ಯಕ್ತಪಡಿಸಿದರು.

ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಲು ಶಿವಮೊಗ್ಗಕ್ಕೆ ಅರಣ್ಯ ಸಚಿವರು ಭೇಟಿ ನೀಡಿ, ಸಭೆ ನಡೆಸಲಿದ್ದಾರೆ. ಜೊತೆಗೆ ಕಂದಾಯ ಸಚಿವರನ್ನೂ ಕರೆಸುವ ಯೋಚನೆಯಿದೆ. ಕಾನೂನು ಸಡಿಲಿಕೆಯ ಬಗ್ಗೆ ನೋಡಲಾಗುತ್ತದೆ. ಅರ್ಹರಿಗೆ ಪಟ್ಟಾ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.

ಶಾಸಕ ಭೀಮಣ್ಣ ನಾಯ್ಕ, ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರು, ಎಸ್.ಕೆ.ಭಾಗ್ವತ, ಸಂತೋಷ ಶೆಟ್ಟಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.