
ಶಿರಸಿ: ‘ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಅಡಿಕೆ ಬೆಳೆ ವಿಮೆಯ ಪೂರ್ಣ ಪ್ರಮಾಣದ ಪಾವತಿ ಹಾಗೂ ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಒತ್ತಾಯಿಸಿದರು.
ತಾಲ್ಲೂಕಿನ ದಾಸನಕೊಪ್ಪದಲ್ಲಿ ಬುಧವಾರ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ನೇತೃತ್ವವಹಿಸಿದ್ದ ಅವರು ಮಾತನಾಡಿದರು. ‘ಬೆಳೆ ವಿಮೆ ವಿಚಾರದಲ್ಲಿ ರೈತರಿಗೆ ನಿರಂತರ ವಂಚನೆಯಾಗುತ್ತಿದೆ. ಮಳೆ ಮಾಪನ ಯಂತ್ರ ಸರಿಯಿಲ್ಲ ಎಂಬ ನೆಪವೊಡ್ಡಿ ವಿಮಾ ಕಂಪನಿಗಳು ರೈತರ ಖಾತೆಗೆ ಹಣ ಜಮಾ ಮಾಡಲು ಹಿಂದೇಟು ಹಾಕುತ್ತಿವೆ. ವಿಮಾ ಕಂತು ಕಟ್ಟಿಸಿಕೊಳ್ಳುವಾಗ ಇಲ್ಲದ ತಾಂತ್ರಿಕ ಕಾರಣಗಳು ಹಣ ನೀಡುವಾಗ ಏಕೆ ಬರುತ್ತವೆ ಎಂದು ಪ್ರಶ್ನಿಸಿದ ಅವರು, ಕಳೆದ ವರ್ಷದಂತೆ ಈ ವರ್ಷ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಹಾವೇರಿ-ಶಿರಸಿ ಹೆದ್ದಾರಿ ಕಾಮಗಾರಿ ವಿಳಂಬದಿಂದಾಗಿ ಧೂಳು ಮತ್ತು ಹೊಂಡಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ಅಸ್ತಮಾದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಿತ್ಯ ಅಪಘಾತಗಳು ಸಂಭವಿಸುತ್ತಿವೆ’ ಎಂದು ದೂರಿದ ಅವರು, ‘ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆ ಅವಧಿಯನ್ನು ಆರು ತಿಂಗಳು ವಿಸ್ತರಿಸಬೇಕು, ದಾಸನಕೊಪ್ಪದಲ್ಲಿ ಗೋವಿನಜೋಳ ಖರೀದಿ ಕೇಂದ್ರ ತಕ್ಷಣ ಪ್ರಾರಂಭಿಸಬೇಕು. ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ಪದವಿಪೂರ್ವ ಕಾಲೇಜು ಆರಂಭಿಸಬೇಕು’ ಎಂದು ಆಗ್ರಹಿಸಿದರು.
ರೈತ ಸಂಘದ ಪ್ರಮುಖ ಸತೀಶ ನಾಯ್ಕ ಮಾತನಾಡಿ, ‘ರೈತರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ವಿಮಾ ಕಂಪನಿಗಳ ಅಧಿಕಾರಿಗಳನ್ನು ಕಟ್ಟಿಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಚಂದ್ರಶೇಖರ ಜಿ.ಆರ್. ಅವರು ರೈತರ ಮನವಿ ಸ್ವೀಕರಿಸಿ, ‘ಶೀಘ್ರದಲ್ಲೇ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ನೀಡಲು ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪೆಡೆದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಗೀತಾ ಪಾಟೀಲ, ತೋಟಗಾರಿಕೆ, ಹೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತ ಸಂಘಟನೆಯ ಪ್ರಮುಖರಾದ ಪ್ರಮೋದ ಜಕ್ಕಣ್ಣನವರ, ನಾಗರಾಜ, ನವೀನ, ಶಶಿಕುಮಾರ, ದೀಪಕ, ಜಯಪುತ್ರ ಸೇರಿ ನೂರಾರು ರೈತರು ಉಪಸ್ಥಿತರಿದ್ದರು.
ಅತಿವೃಷ್ಠಿ ಹಾಗೂ ವಿವಿಧ ರೋಗ ಬಾಧೆಯಿಂದ ಪ್ರಸಕ್ತವರ್ಷ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಹೊಸ ಸಾಲ ನೀಡಬೇಕು.ರಾಘವೇಂದ್ರ ನಾಯ್ಕ ರಾಜ್ಯ ರೈತ ಸಂಘ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.