
ಶಿರಸಿಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು
ಶಿರಸಿ: ಆಪರೇಷನ್ ಸಿಂಧೂರದ ಹಿನ್ನೆಲೆಯಲ್ಲಿ ಮಹಿಳಾ ಶಕ್ತಿಯನ್ನು ಪ್ರತಿಬಿಂಬಿಸಲು ಹೂವುಗಳಿಂದಲೇ ನಿರ್ಮಿಸಲಾದ ರಫೇಲ್ ಯುದ್ಧ ವಿಮಾನ, ಬ್ರಹ್ಮೋಸ್ ಕ್ಷಿಪಣಿಗಳು ಹಾಗೂ ವಿಶ್ವ ಚಾಂಪಿಯನ್ ಭಾರತೀಯ ವನಿತಾ ಕ್ರಿಕೆಟ್ ತಂಡದ ಗೌರವಾರ್ಥ ಹೂವು ಮತ್ತು ಸಸಿಗಳಿಂದ ಸಿದ್ಧಪಡಿಸಿದ ವರ್ಟಿಕಲ್ ಗಾರ್ಡನ್ ಸೇರಿ ಹಲವು ಪುಷ್ಪ ಮಾದರಿಗಳು ಇಲ್ಲಿನ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿವೆ.
ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಆಯೋಜಿಸಲಾದ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳವು ರಕ್ಷಣಾ ತಂತ್ರಜ್ಞಾನ ಮತ್ತು ನಾರಿ ಶಕ್ತಿಯ ಪುಷ್ಪ ಅನಾವರಣಕ್ಕೆ ಸಾಕ್ಷಿಯಾಗಿದೆ. ಸಾವಿರಾರು ಬಣ್ಣದ ಹೂವುಗಳನ್ನು ಬಳಸಿ ಕಲಾತ್ಮಕವಾಗಿ ರೂಪಿಸಲಾದ ರಫೇಲ್ ವಿಮಾನ ಮತ್ತು ಎಸ್-400 ಕ್ಷಿಪಣಿ ಮಾದರಿಗಳು ಪ್ರೇಕ್ಷಕರಲ್ಲಿ ದೇಶಾಭಿಮಾನ ಮೂಡಿಸಿದವು. ಇದರೊಂದಿಗೆ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ವಿವಿಧ ಧಾನ್ಯಗಳು ಮತ್ತು ಹೂವುಗಳಿಂದ ಮೂಡಿಸಲಾದ ರಂಗೋಲಿಗಳು ಗಮನ ಸೆಳೆದವು. ಕಾಫಿ ಬೀಜದ ಬೃಹತ್ ರಂಗೋಲಿ, ಆಕರ್ಷಕ ತರಕಾರಿ ಕೆತ್ತನೆಗಳು ಹಾಗೂ ಪುಷ್ಪಾಲಂಕಾರದ ಸೆಲ್ಫಿ ಪಾಯಿಂಟ್‌ಗಳು ಸಾರ್ವಜನಿಕರ ಮನಗೆದ್ದವು. ತೆಂಗಿನ ಎಲೆಯಿಂದ ಸಿದ್ಧಪಡಿಸಿರುವ ನವಿಲುಗಳ ಮಾದರಿ ಆಕರ್ಷಕವೆನಿದವು. ಇದೇ ವೇಳೆ ಜಿಲ್ಲೆಯ ರೈತರು ಪ್ರದರ್ಶನಕ್ಕಿಟ್ಟ ತೋಟಗಾರಿಕಾ ಬೆಳೆಗಳ ವೈವಿಧ್ಯತೆ ನೋಡುಗರ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, 'ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ವಿಜ್ಞಾನಿಗಳು ಶ್ರಮಿಸುತ್ತಿದ್ದು, ರೈತರು ಪರ್ಯಾಯವಾಗಿ ಕಾಫಿ ಮತ್ತು ಕಾಳುಮೆಣಸು ಬೆಳೆಯುವತ್ತ ಆಸಕ್ತಿ ತೋರಬೇಕು' ಎಂದರು. 'ಹವಾಮಾನಾಧಾರಿತ ಬೆಳೆವಿಮೆ ಪರಿಹಾರ ನೀಡಲು ವಿಳಂಬವಾಗುತ್ತಿದೆ. ಮಳೆ ಮಾಪಕಗಳ ನಿರ್ವಹಣೆ ವಿಮಾ ಕಂಪನಿಯದ್ದಾಗಿದೆ. ಮಾಪಕಗಳು ಸರಿಯಿಲ್ಲ ಎಂದು ನೆಪ ಹೇಳಿ ವಿಮೆ ಪರಿಹಾರ ನೀಡದಿದ್ದರೆ ಪರಿಣಾಮ ಎದುರಿಸಬೇಕಿದೆ. ವಿಮಾ ಕಂಪನಿ ನಿಯಂತ್ರಣ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಸಂಸದರೂ ಈ ಬಗ್ಗೆ ಗಮನ ನೀಡಬೇಕು' ಎಂದು ಹೇಳಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, 'ಕೃಷಿ ಮತ್ತು ತೋಟಗಾರಿಕೆಯಲ್ಲಿ ಎದುರಾಗುವ ರೋಗಬಾಧೆಗಳನ್ನು ಸವಾಲಾಗಿ ಸ್ವೀಕರಿಸಿ ರೈತರು ಮುನ್ನಡೆಯಬೇಕು' ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ಶಿರಸಿ ಘಟಕದ ಅಧ್ಯಕ್ಷೆ ಸುಮಾ ಉಗ್ರಾಣಕರ, ಆತ್ಮ ಸಮಿತಿಯ ನಾರಾಯಣ ಹೆಗಡೆ ಹಿಲ್ಲೂರು, ದುಶ್ಯಂತರಾಜ ಕೊಲ್ಲೂರಿ, ಪ್ರಮುಖರಾದ ವೀರಭದ್ರ ನಾಯ್ಕ, ಕಾಸಿಂ ಸಾಬ್, ರೂಪಾ ಪಾಟೀಲ, ಶಿವಪ್ರಕಾಶ ಗಾಂವ್ಕರ, ಜಿ.ಆರ್.ಹೆಗಡೆ ಬೆಳ್ಳೆಕೇರಿ, ಎಂ.ಎನ್.ಭಟ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪಾಂಡು ಕೆ, ಮಧುಕರ ನಾಯ್ಕ ಇತರರಿದ್ದರು.
ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಬಿ.ಪಿ.ಸತೀಶ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಗಣೇಶ ಹೆಗಡೆ ನಿರೂಪಿಸಿದರು.
ನಗರ ವಲಸೆ ಹೆಚ್ಚುತ್ತಿರುವ ಈ ಕಾಲದಲ್ಲಿ ಪಾರಂಪರಿಕ ಕೃಷಿಗೆ ಪುನಶ್ಚೇತನ ನೀಡುವ ಅನಿವಾರ್ಯತೆ ಇದೆ.ಭೀಮಣ್ಣ ನಾಯ್ಕ ಶಾಸಕ
ಸಾಧಕರಿಗೆ ಸನ್ಮಾನ
ತೋಟಗಾರಿಕೆ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ವೇದಾ ಹೆಗಡೆ ನೀರ್ನಳ್ಳಿ ಸುಷ್ಮಾ ಭಟ್ ನೆವಳಸೆ ಸುಮಾ ಭಟ್ ಹೊಸಗದ್ದೆ ಪುಷ್ಮಾ ಮೋಹನ ಸಾಲಗಾಂವ ಚಂದನ ಕೊಲ್ಲೂರಿ ಪ್ರಸನ್ನ ಹೆಗಡೆ ಕೆ.ಕೃಷ್ಣ ಭಟ್ ಚನ್ನಪ್ಪ ಕಲ್ಲೇಕರ ಜ್ಯೋತಿಬಾ ಪಾಟೀಲ ನಾಗರಾಜ ನಾಯ್ಕ ಕುಮಟಾ ಕಿರಣ ಪಾಟೀಲ ಮುಂಡಗೋಡ ವಿಘ್ನೇಶ್ವರ ಭಟ್ ಯಲ್ಲಾಪುರ ಸತ್ಯಗಣಪತಿ ಹೆಗಡೆ ಶಿರಸಿ ಸುಬ್ರಹ್ಮಣ್ಯ ಗಾಂವ್ಕರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸರ್ವೋತ್ತಮ ಪ್ರಶಸ್ತಿ ಪಡೆದ ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ಸತೀಶ ಹೆಗಡೆ ದಯಾನಂದ ರಮೇಶ ಬಿ ಕೃಷ್ಣ ಕಳ್ಳೂರ ದಯಾನಂದ ಕಾರಗಿ ನಾಗಪ್ಪ ಕೊಟ್ಟೂರು ಸಂತೋಷ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.