
₹15 ಕೋಟಿ ವೆಚ್ಚದ ಕಾಮಗಾರಿ 2022ರಲ್ಲಿ ಮಂಜೂರಿ 2026ರಲ್ಲಿ ಬಳಕೆ ಸಾಧ್ಯತೆ
ಶಿರಸಿ: ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಚಾವಣಿಗೆ ಕಬ್ಬಿಣದ ಕಮಾನುಗಳ ಅಳವಡಿಕೆ ಕಾರ್ಯ ಭರದಿಂದ ನಡೆದಿದೆ. ಇದರಿಂದ 2024ರಲ್ಲಿಯೇ ಪೂರ್ಣಗೊಳ್ಳಬೇಕಿದ್ದ ಕಟ್ಟಡ ಕಾಮಗಾರಿ ಎರಡು ವರ್ಷಗಳ ನಂತರವಾದರೂ ಕ್ರೀಡಾಳುಗಳ ಬಳಕೆಗೆ ಸಿಗುವ ವಿಶ್ವಾಸ ಮೂಡಿದೆ.
2022ರ ಆರಂಭದಲ್ಲೇ ಒಳಾಂಗಣ ಕ್ರೀಡಾಂಗಣ ಮಂಜೂರಾಗಿ ಸುಸಜ್ಜಿತ ಕ್ರೀಡಾಂಗಣದ ಆಸೆ ಚಿಗುರಿತ್ತು. ಅಂದಿನ ವಿಧಾನಸಭಾ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಅವರು ಶಿರಸಿಯಲ್ಲಿ ಜಂಟಿ ಸಭೆ ನಡೆಸಿ, ಕ್ರೀಡಾಂಗಣಕ್ಕೆ ಹುಬ್ಬಳ್ಳಿ ರಸ್ತೆಯ ಬದಿಯಲ್ಲಿ ಕ್ರೀಡಾ ಇಲಾಖೆಗೆ ಸೇರಿದ ಸೂಕ್ತವಾದ ಜಾಗವನ್ನು ಅಂತಿಮಗೊಳಿಸಿದ್ದರು. ಆಡಳಿತಾತ್ಮಕ ಪ್ರಕ್ರಿಯೆಗಳ ನಂತರ ಕಾಮಗಾರಿ ನಡೆದಿತ್ತು. ಮುಂದಿನ ಎರಡು ವರ್ಷದೊಳಗೆ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಗುತ್ತಿಗೆದಾರ ಸಂಸ್ಥೆಗೆ ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿತ್ತು. ಆದರೆ ಕಾಮಗಾರಿ ಅರ್ಧವಾದ ನಂತರ ಗುತ್ತಿಗೆದಾರರ ವಿಳಂಬ ನೀತಿಯಿಂದ ಕೆಲವು ತಿಂಗಳು ನನೆಗುದಿಗೆ ಬಿದ್ದಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಒತ್ತಡ, ಶಾಸಕರ ಸೂಚನೆಯಿಂದ ಕಟ್ಟಡ ಕಾಮಗಾರಿ ಶೇಕಡಾ 90ರಷ್ಟು ಮುಕ್ತಾಯವಾಗಿದೆ.
‘2022ರಲ್ಲಿ ರಾಜ್ಯ ಸರ್ಕಾರದಿಂದ ₹10 ಕೋಟಿ ಹಾಗೂ ಶಾಸಕ ಭೀಮಣ್ಣ ನಾಯ್ಕ ಆಸಕ್ತಿಯಿಂದ ಹೆಚ್ಚುವರಿ ₹5 ಕೋಟಿ ಒಟ್ಟು ₹15 ಕೋಟಿ ಬೃಹತ್ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಈ ಒಳಾಂಗಣ ಕ್ರೀಡಾಂಗಣವು ಒಟ್ಟು 2.5 ಎಕರೆ ವಿಸ್ತಾರವಾದ ಜಾಗದಲ್ಲಿ ತಲೆಯೆತ್ತುತ್ತಿದೆ. ವಿಶೇಷವಾಗಿ ಅಥ್ಲೆಟಿಕ್ಸ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಪೂರಕವಾದ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಬೆಳಗಾವಿ ಮೂಲದ ಖಾಸಗಿ ಸಂಸ್ಥೆಯು ಈ ಬೃಹತ್ ಯೋಜನೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಕ್ರೀಡಾಂಗಣವು ಸರಿಸುಮಾರು 400 ಆಸನಗಳ ಸಾಮರ್ಥ್ಯವನ್ನು ಹೊಂದಿದ್ದು, ಕ್ರೀಡಾಕೂಟಗಳನ್ನು ವೀಕ್ಷಿಸಲು ಬರುವ ಪ್ರೇಕ್ಷಕರಿಗೂ ಉತ್ತಮ ವ್ಯವಸ್ಥೆ ಅಳವಡಿಸಲಾಗುತ್ತಿದೆ’ ಎನ್ನುತ್ತಾರೆ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ರಾಮಲಿಂಗೇಶ.
‘ಮೇಲ್ಛಾವಣಿಯನ್ನು ಬಲವಾದ ಲೋಹದ ಪೈಪ್‍ಗಳಿಂದ ನಿರ್ಮಿಸಲಾಗುತ್ತಿದೆ. ಕಮಾನಿನ ಆಕಾರ ನೀಡುವ ಕಾರಣ ಭಾರವನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲ ಆಗುತ್ತದೆ. ಲೋಹ ಜೋಡಿಸುವ ಕಾರ್ಯವೂ ಸ್ಥಳದಲ್ಲಿಯೇ ಆಗುತ್ತಿದೆ. ಈ ನಿಟ್ಟಿನಲ್ಲಿ ಜಾರ್ಖಂಡ್‍ನಿಂದ ಲೋಹಗಳನ್ನು ತರಿಸಲಾಗಿದೆ. ಹೀಗಾಗಿ ಸ್ವಲ್ಪ ವಿಳಂಬವಾಗಿದೆ’ ಎನ್ನುತ್ತಾರೆ ಅವರು.
2026ರ ಮಳೆಗಾಲಪೂರ್ವ ಒಳಾಂಗಣ ಕ್ರೀಡಾಂಗಣವನ್ನು ಬಳಕೆಗೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕಾಮಗಾರಿಗೆ ವೇಗ ನೀಡಲಾಗಿದೆರಾಮಲಿಂಗೇಶ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್
ಹವಾಮಾನದ ಹಂಗಿಲ್ಲದೆ ಆಟ:
‘ಶಿರಸಿಯ ಸುತ್ತಮುತ್ತಲಿನ ಹಳ್ಳಿಗಳ ಮತ್ತು ಪಟ್ಟಣದ ಕ್ರೀಡಾ ಪ್ರತಿಭೆಗಳು ಮಳೆಗಾಲದ ಸಮಯದಲ್ಲಿ ಕ್ರೀಡಾ ಅಭ್ಯಾಸ ನಡೆಸಲು ಪರದಾಡುವಂತಾಗಿತ್ತು. ಈ ಒಳಾಂಗಣ ಕ್ರೀಡಾಂಗಣ ಪೂರ್ಣಗೊಂಡಲ್ಲಿ ಹವಾಮಾನದ ಹಂಗಿಲ್ಲದೆ ವರ್ಷಪೂರ್ತಿ ಕ್ರೀಡಾ ಚಟುವಟಿಕೆಗಳು ನಡೆಯಲು ಸಾಧ್ಯವಾಗಲಿದೆ. ಅಥ್ಲೆಟಿಕ್ಸ್ ಮತ್ತು ಬ್ಯಾಡ್ಮಿಂಟನ್ ಹೊರತಾಗಿ ಇತರೆ ಒಳಾಂಗಣ ಕ್ರೀಡೆಗಳಿಗೂ ಇದು ವೇದಿಕೆಯಾಗಲಿದೆ ಜತೆಗೆ ಕ್ರೀಡಾ ಕ್ಷೇತ್ರಕ್ಕೆ ಅಗತ್ಯವಾದ ಮೂಲಸೌಕರ್ಯಗಳ ಕೊರತೆಯ ನಡುವೆಯೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದ ಇಲ್ಲಿನ ಪ್ರತಿಭೆಗಳಿಗೆ ಈ ನೂತನ ಕ್ರೀಡಾಂಗಣವು ಹೊಸ ಭರವಸೆ ನೀಡಲಿದೆ’ ಎಂಬುದು ಹಲವು ಕ್ರೀಡಾ ಪ್ರತಿಭೆಗಳ ಮಾತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.