ADVERTISEMENT

ಶಿರಸಿ | ಕೆಡಿಸಿಸಿ ಬ್ಯಾಂಕ್ ಚುಕ್ಕಾಣಿ ಮತ್ತೆ ಹೆಬ್ಬಾರ ವಶ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:35 IST
Last Updated 17 ಫೆಬ್ರುವರಿ 2026, 6:35 IST
ಶಿರಸಿಯ ಕೆಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ ಹಾಗೂ ಉಪಾಧ್ಯಕ್ಷ ಕೃಷ್ಣ ದೇಸಾಯಿ ಅವರನ್ನು ಅಭಿನಂದಿಸಲಾಯಿತು
ಶಿರಸಿಯ ಕೆಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ ಹಾಗೂ ಉಪಾಧ್ಯಕ್ಷ ಕೃಷ್ಣ ದೇಸಾಯಿ ಅವರನ್ನು ಅಭಿನಂದಿಸಲಾಯಿತು   

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಹಕಾರ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಮತ್ತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಉಪಾಧ್ಯಕ್ಷ ಸ್ಥಾನ ಜೊಯಿಡಾದ ಕೃಷ್ಣ ದೇಸಾಯಿ ಅವರ ಪಾಲಾಗಿದೆ.

ಈ ಬಾರಿಯ ಬ್ಯಾಂಕ್ ಚುನಾವಣೆ ಕೇವಲ ಆಡಳಿತಾತ್ಮಕ ಆಯ್ಕೆಯಾಗಿರದೆ, ಜಿಲ್ಲೆಯ ಇಬ್ಬರು ಪ್ರಬಲ ನಾಯಕರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಮಾಜಿ ಅಧ್ಯಕ್ಷ ಶಿವರಾಮ ಹೆಬ್ಬಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ತಂಡಗಳ ನಡುವೆ ನಡೆದ ನೇರ ಹಣಾಹಣಿಯಲ್ಲಿ ಹೆಬ್ಬಾರ ಅವರ ಕೈ ಮೇಲಾಗಿದೆ. ಒಟ್ಟು 16 ನಿರ್ದೇಶಕ ಸ್ಥಾನಗಳ ಪೈಕಿ ಹೆಬ್ಬಾರ ಬೆಂಬಲಿತ 11 ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿದ್ದರೆ, ಸಚಿವರ ತಂಡ ಕೇವಲ 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ವಿವಿಧ ಕಾನೂನು ಹೋರಾಟ ಹಾಗೂ ಕೋರ್ಟ್ ವ್ಯಾಜ್ಯಗಳಿಂದಾಗಿ ಕಳೆದ ಮೂರು ತಿಂಗಳಿಂದ ವಿಳಂಬವಾಗಿದ್ದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಸೋಮವಾರ ಶಿರಸಿ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ತೆರೆ ಬಿದ್ದಿತು. ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾರವಾರದ ಪ್ರಕಾಶ ಗುನಗಿ ಹಾಗೂ ಅಂಕೋಲಾದ ಬೀರಣ್ಣ ನಾಯಕ ಅವರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತಾದರೂ, ಅಂತಿಮ ಕ್ಷಣದಲ್ಲಿ ಕೃಷ್ಣ ದೇಸಾಯಿ ಅವರು ಅದೃಷ್ಟದ ಜಯ ಒಲಿಸಿಕೊಂಡರು.

ADVERTISEMENT

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಶಿವರಾಮ ಹೆಬ್ಬಾರ, ‘ಜಿಲ್ಲೆಯ ಸಹಕಾರಿಗಳ ಒಮ್ಮತದ ನಿರ್ಧಾರದಿಂದ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆ ಅವಿರೋಧವಾಗಿ ನಡೆಯುವ ಮೂಲಕ ಸಹಕಾರ ರಂಗದ ಘನತೆ ಎತ್ತಿ ಹಿಡಿಯಲಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಪ್ರಸ್ತುತ ಅಡಿಕೆ ಬೆಳೆಗಾರರು ಸಂಕಷ್ಟದ ಕಾಲಘಟ್ಟದಲ್ಲಿದ್ದಾರೆ. ಅವರ ರಕ್ಷಣೆಗೆ ಬ್ಯಾಂಕ್ ಸದಾ ಸಿದ್ಧವಿರಲಿದೆ. ಆರ್ಥಿಕ ವರ್ಷದ ಅಂತ್ಯದ ಅವಧಿಯಲ್ಲಿ ಬ್ಯಾಂಕ್ ಪ್ರಗತಿಯೂ ಅಷ್ಟೇ ಮುಖ್ಯವಾಗಿದ್ದು, ಗ್ರಾಹಕರ ವಿಶ್ವಾಸ ಗಳಿಸುವುದು, ಸಾಲ ವಿತರಣೆ ಹಾಗೂ ವಸೂಲಾತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲಾಗುವುದು. ಆರ್‌ಬಿಐ ನಿಯಮಾವಳಿಯಂತೆ ಪಾರದರ್ಶಕ ಆಡಳಿತ ನೀಡಲಾಗುವುದು’ ಎಂದರು.

‘ಬೆಳೆವಿಮೆ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಅವರು, ‘ವಿಮೆ ತಡೆ ಹಿಡಿಯುವವರು ಯಾರು ಮತ್ತು ಪರಿಹಾರ ನೀಡುವವರು ಯಾರು ಎಂಬ ಗೊಂದಲಕ್ಕೆ ರೈತರ ಹಿತದೃಷ್ಟಿಯಿಂದ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದರು. 

ಮಧ್ಯಮಾವಧಿ ಸಾಲ ಮರುಪಾವತಿ ಭರಣವನ್ನು ಮುಂದೂಡುವ ಕುರಿತು ಆಡಳಿತ ಸಮಿತಿಯಲ್ಲಿ ಚರ್ಚಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುಮತಿ ಕೋರಲಾಗುವುದು
ಶಿವರಾಮ ಹೆಬ್ಬಾರ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.