ADVERTISEMENT

ಮಾರ್ಚ್‌ 15 ರಿಂದ 23ರ ವರೆಗೆ ಶಿರಸಿ ಮಾರಿಕಾಂಬಾ ಜಾತ್ರೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 10:52 IST
Last Updated 7 ಜನವರಿ 2022, 10:52 IST
ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ದಿನಾಂಕವನ್ನು ರಾಮಕೃಷ್ಣ ಭಟ್ಟ ಕೆರೆಕೈ ಅವರು ಘೋಷಣೆ ಮಾಡಿದರು.
ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ದಿನಾಂಕವನ್ನು ರಾಮಕೃಷ್ಣ ಭಟ್ಟ ಕೆರೆಕೈ ಅವರು ಘೋಷಣೆ ಮಾಡಿದರು.    

ಶಿರಸಿ: ದಕ್ಷಿಣ ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಒಂದಾಗಿರುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆ ಮಾರ್ಚ್‌ 15 ರಿಂದ 23ರ ವರೆಗೆ ಜರುಗಲಿದೆ.

ಶುಕ್ರವಾರ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ಅರ್ಚಕ ರಾಮಕೃಷ್ಣ ಭಟ್ಟ ಕೆರೆಕೈ ಜಾತ್ರೆಯ ದಿನಾಂಕ ಘೋಷಿಸಿದರು. ಪ್ಲವನಾಮ ಸಂವತ್ಸರದ ಫಾಲ್ಗುಣ ಶುಕ್ಲ ದ್ವಾದಶಿಯಂದು ಜಾತ್ರೆ ಆರಂಭವಾಗಲಿದೆ.

ಜಾತ್ರೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಅಜಯ ನಾಡಿಗ ಮುಹೂರ್ತ ದೀಪ ಬೆಳಗಿದರು. ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.

ADVERTISEMENT

ಜ.26 ರಿಂದ ವಿಧಿವಿಧಾನ: ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿ–ವಿಧಾನಗಳು ಜ.26 ರಿಂದ ಪ್ರಾರಂಭವಾಗಲಿವೆ. ಜ.26 ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ.22 ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಫೆ.25ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಮಾ.1 ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಮಾ.4ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಅದೇ ದಿನ ಉತ್ತರ ದಿಕ್ಕಿಗೆ 4ನೇ ಹೊರಬೀಡು, ಮಾ.8 ರಂದು ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ.ಮಾ.9 ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ.

ಮಾರ್ಚ್ 15ರ ಮಧ್ಯಾಹ್ನ 12.21 ರಿಂದ 12.33ರ ಒಳಗೆ ಗಂಟೆಯಿಂದ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.18 ರಿಂದ 11.27ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 16 ರಂದು ಬೆಳಿಗ್ಗೆ 7.04 ಗಂಟೆಯಿಂದ ದೇವಿಯ ರಥಾರೋಹಣ ನಡೆಯಲಿದ್ದು, 8.36ರ ಗಂಟೆಯೊಳಗೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಜರುಗುವುದು. ಮಾ.17 ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ.

ಮಾರ್ಚ್ 23 ರಂದು ಬೆಳಿಗ್ಗೆ 9.33 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಯುಗಾದಿಯಂದು ದೇವಿಯ ಪುನರ್‌ ಪ್ರತಿಷ್ಠೆ ನಡೆಯಲಿದೆ.

ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ,ಶಿವಾನಂದ ಶೆಟ್ಟಿ, ಬಾಬುದಾರ ಜಗದೀಶ ಗೌಡ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಡಿಎಸ್ಪಿ ರವಿ ನಾಯ್ಕ, ಇತರ ಅಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಇದ್ದರು.

ಶಿರಸಿ ಜಾತ್ರೆಯ ಮುಹೂರ್ತ ನಿಗದಿಯಾಗುತ್ತಿದ್ದಂತೆ ದೇವಸ್ಥಾನದ ಬಾಬುದಾರ ಮುಖ್ಯಸ್ಥ ಅಜಯ ನಾಡಿಗ ಮುಹೂರ್ತ ದೀಪ ಬೆಳಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.