
ಶಿರಸಿ: ನಗರವು ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಜ್ಜಾಗುತ್ತಿರುವ ಬೆನ್ನಲ್ಲೇ, ನಗರಸಭೆಯ ಆಮೆಗತಿಯ ಸಿದ್ಧತೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.
ವಿಶೇಷವಾಗಿ ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಭಕ್ತರಿಗೆ ನೀರುಣಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆಂಗ್ರೆ ಹಾಗೂ ಮಾರಿಗದ್ದೆ ನದಿಗಳಲ್ಲಿ ತಾತ್ಕಾಲಿಕ ಒಡ್ಡುಗಳ ನಿರ್ಮಾಣ ಆಗದಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದ ಜೀವನಾಡಿಯಾದ ಕೆಂಗ್ರೆ ಹಳ್ಳ ಮತ್ತು ಮಾರಿಗದ್ದೆ ಜಾಕ್‍ವೆಲ್‌ಗಳ ಬಳಿ ಪ್ರತಿ ವರ್ಷ ಈ ವೇಳೆಗೆ ತಾತ್ಕಾಲಿಕ ಒಡ್ಡುಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿತ್ತು. ಆದರೆ, ಈ ಬಾರಿ ಫೆ.24 ರಿಂದ ಜಾತ್ರೆ ಆರಂಭವಾಗುತ್ತಿದ್ದರೂ, ನಗರಸಭೆಯು ಅತ್ತ ಗಮನಹರಿಸಿಲ್ಲ. ಜಾತ್ರೆ ಸಮಯದಲ್ಲಿ ನೀರಿನ ಬೇಡಿಕೆ ಹೆಚ್ಚಿರುತ್ತದೆ ಎಂಬುದು ಗೊತ್ತಿದ್ದೂ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಜನರ ಆರೋಪ.
‘ಒಡ್ಡು ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗದಿರುವುದು ಮುಂಬರುವ ದಿನಗಳಲ್ಲಿ ತೀವ್ರ ಜಲಕ್ಷಾಮದ ಮುನ್ಸೂಚನೆ ನೀಡುತ್ತಿದೆ. ನೀರಿನ ಸಮಸ್ಯೆಯು ಕೇವಲ ಕುಡಿಯುವ ನೀರಿಗೆ ಸೀಮಿತವಾಗಿಲ್ಲ, ಇದು ಜಾತ್ರೆಯ ನೈರ್ಮಲ್ಯ ಮತ್ತು ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಲಿದೆ. ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾದರೆ, ಹೋಟೆಲ್‌ಗಳು, ವಸತಿ ನಿಲಯಗಳು ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಅಸಾಧ್ಯವಾಗಲಿದೆ. ಹೀಗಾಗಿ ತಕ್ಷಣ ಒಡ್ಡು ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡು, ಲಭ್ಯವಿರುವ ನೀರನ್ನು ಪೋಲಾಗದಂತೆ ಸಂಗ್ರಹಿಸಬೇಕಿದೆ’ ಎನ್ನುತ್ತಾರೆ ನಗರ ನಿವಾಸಿ ದಿನಕರ ಗೌಡ.
‘ಕಳೆದ ವರ್ಷಗಳ ಅನುಭವವನ್ನು ಗಮನಿಸಿದರೆ, ಒಡ್ಡು ನಿರ್ಮಿಸಿದ ನಂತರವೂ ನಗರದಲ್ಲಿ ನೀರಿನ ಹಂಚಿಕೆಯ ವಿತರಣೆಯಲ್ಲಿ ಭಾರಿ ವ್ಯತ್ಯಯವಾಗುತ್ತಿತ್ತು. ಜನರಿಗೆ ದಿನದ 24 ಗಂಟೆ ನೀರು ಬಿಡಿ, ವಾರಕ್ಕೆ ಕೇವಲ ಮೂರು ದಿನ ಮಾತ್ರ ನೀರು ಪೂರೈಸುವ ಅನಿವಾರ್ಯತೆ ಎದುರಾಗಿತ್ತು. ಒಂದೆಡೆ ನೈಸರ್ಗಿಕವಾಗಿ ನೀರಿನ ಹರಿವು ಕುಂಠಿತವಾಗುತ್ತಿದ್ದರೆ, ಇನ್ನೊಂದೆಡೆ ಒಡ್ಡು ನಿರ್ಮಾಣ ಆಗದ ಕಾರಣ ನೀರು ಸಂಗ್ರಹಣಾ ವ್ಯವಸ್ಥೆಯೂ ಕುಸಿದುಬಿದ್ದಿದೆ. 70 ಸಾವಿರ ಸ್ಥಳೀಯರ ಜತೆಗೆ ಜಾತ್ರೆಯ ಸಂದರ್ಭದಲ್ಲಿ ಸೇರುವ ಲಕ್ಷಾಂತರ ಭಕ್ತಾದಿಗಳ ನೀರಿನ ಬೇಡಿಕೆಯನ್ನು ನಗರಸಭೆ ಹೇಗೆ ನಿಭಾಯಿಸಲಿದೆ ಎಂಬುದು ಪ್ರಶ್ನೆಯಾಗಿದೆ’ ಎನ್ನುತ್ತಾರೆ ಶಂಕರ ನಾಯ್ಕ.
ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್ ವೆಲ್ ಬಳಿ ತಾತ್ಕಾಲಿಕ ಒಡ್ಡು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆಪ್ರಕಾಶ ಚನ್ನಪ್ಪನವರ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.