
ಶಿರಸಿ: ಇಲ್ಲಿನ ಮಾರಿಕಾಂಬಾ ಜಾತ್ರೆಯ ಪೂರ್ವ ವಿಧಿವಿಧಾನಗಳಲ್ಲಿ ಒಂದಾದ ಹೊರಬೀಡು ಉತ್ಸವದ ಸಂದರ್ಭದಲ್ಲಿ ಚಲವಾದಿ ಸಮಾಜದ ಪಡಲಗಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಉಪವಿಭಾಗಾಧಿಕಾರಿ ಚಂದ್ರಶೇಖರ ಜಿ.ಆರ್. ನೇತೃತ್ವದಲ್ಲಿ ಮಾರಿಕಾಂಬಾ ದೇವಾಲಯದ ಸಭಾಂಗಣದಲ್ಲಿ ಮಂಗಳವಾರ ತುರ್ತು ಸಭೆ ನಡೆಯಿತು.
ಹೊರಬೀಡಿನ ವೇಳೆ ಚಲವಾದಿ ಸಮಾಜದ ಪಡಲಗಿಗಳನ್ನು ಕೆಳಗಿಟ್ಟು ಪೂಜಿಸಲಾಗುತ್ತಿದೆ ಮತ್ತು ಬೇಧಭಾವ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಮಾಜದ ಮುಖಂಡರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜರುಗಿದ ಸಭೆಯಲ್ಲಿ ಆಡಳಿತ ಮಂಡಳಿ ಧರ್ಮದರ್ಶಿಗಳು, ಅಧಿಕಾರಿಗಳು ಭಾಗವಹಿಸಿ ಸುದೀರ್ಘ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಬಾಬುದಾರರ ಮುಖ್ಯಸ್ಥ ಜಗದೀಶ ಗೌಡ, ‘ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಜಾತಿ ತಾರತಮ್ಯ ಮಾಡುತ್ತಿಲ್ಲ. ಅನಾದಿಕಾಲದಿಂದ ನಡೆದುಕೊಂಡು ಬಂದ ವಿಧಿವಿಧಾನಗಳನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದರು.
ಹಿರಿಯರಾದ ಶಾಂತವ್ವ ಮಾತನಾಡಿ, ‘ತಾವು ದಶಕಗಳಿಂದ ಜಾತ್ರೆಯನ್ನು ನೋಡುತ್ತಿದ್ದು, ದೇವಿಯ ಸೇವೆಯಲ್ಲಿ ಎಂದೂ ಇಂತಹ ಬೇಧಭಾವ ಕಂಡಿಲ್ಲ’ ಎಂದರು.
ಚಲವಾದಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ಚಲವಾದಿ ತಮ್ಮ ಅಹವಾಲು ಮಂಡಿಸಿ, ‘ಪಡಲಗಿ ಇಡುವ ವಿಷಯದಲ್ಲಿ ತಾರತಮ್ಯ ತೋರುತ್ತಿರುವುದರಿಂದ ಅದನ್ನು ಸರಿಪಡಿಸಿ ಸಾಮಾಜಿಕ ನ್ಯಾಯದ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
‘ಕಟ್ಟೆಯ ಮೇಲೆ ದೇವಸ್ಥಾನದ ನಾಲ್ಕು ಪಡಲಗಿಗಳನ್ನು ಮಾತ್ರ ಇಡಲಾಗುವುದು ಮತ್ತು ಉಳಿದ ಎಲ್ಲ ಪಡಲಗಿಗಳನ್ನು ಎದುರು ಭಾಗದಲ್ಲಿ ಇರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ. ಸಭೆಯ ವರದಿಯನ್ನು ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಿಕೊಡಲಾಗುವುದು. ಅವರಿಂದ ಬರುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ ತಿಳಿಸಿದರು.
ತಹಶೀಲ್ದಾರ್ ಪಟ್ಟರಾಜ ಗೌಡ, ದೇವಸ್ಥಾನದ ಉಪಾಧ್ಯಕ್ಷ ಸುದೇಶ ಜೋಗಳೇಕರ ಹಾಗೂ ಆಡಳಿತ ಮಂಡಳಿಯ ಸದಸ್ಯರು, ನಾಡಿಗ ಪ್ರಮುಖ ವಿಜಯ ನಾಡಿಗ ಪಾಲ್ಗೊಂಡಿದ್ದರು.
ಹೊರಬೀಡಿನ ವೇಳೆ ಸುಮಾರು 58ಕ್ಕೂ ಹೆಚ್ಚು ಪಡಲಗಿಗಳಾಗುವುದರಿಂದ ಸ್ಥಳಾವಕಾಶದ ಕೊರತೆ ಇರುತ್ತದೆ. ಈ ಬಗ್ಗೆ ಎಲ್ಲರೂ ಸಹಕರಿಸಬೇಕು.– ವಿಜಯ ನಾಡಿಗ, ನಾಡಿಗ ಪ್ರಮುಖ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.