
ಶಿರಸಿ: ಶಕ್ತಿ ದೇವತೆಗಳ ಜಾತ್ರೆ ಎಂದರೆ ಪ್ರಾಣಿ ಬಲಿಯ ಭೀಬತ್ಸ ದೃಶ್ಯಗಳು ಕಣ್ಣಮುಂದೆ ಬರುತ್ತವೆ. ಆದರೆ, ಶಿರಸಿಯಲ್ಲಿ ಮಾತ್ರ ಪರಿಸ್ಥಿತಿ ತದ್ವಿರುದ್ಧವಾಗಿದ್ದು, ಇಲ್ಲಿನ ಪಟ್ಟದ ಕೋಣವು ಮಾರಿಕಾಂಬಾ ದೇವಿಯಷ್ಟೇ ಗೌರವಕ್ಕೆ ಪಾತ್ರವಾಗುವ ಮೂಲಕ ರಾಜ ಮರ್ಯಾದೆ ಪಡೆಯುತ್ತದೆ. ಬೀದಿ ಬೀದಿಯಲ್ಲಿ ಪೂಜೆ, ಫಲಾಹಾರ ಪಡೆದು ನಗರದಾದ್ಯಂತ ಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತದೆ.
ಫೆ.24ರಿಂದ ಮಾ.4ರವರೆಗೆ ಅದ್ಧೂರಿಯಾಗಿ ನೆರವೇರಲಿರುವ ದ್ವೈವಾರ್ಷಿಕ ಮಾರಿಕಾಂಬಾ ಜಾತ್ರೆಯಲ್ಲಿ ಪಟ್ಟದ ಕೋಣನಿಗೆ ವಿಶೇಷ ಪ್ರಾಶಸ್ತ್ಯವಿದೆ. ಸಾಮಾನ್ಯವಾಗಿ ಜಾತ್ರೆಗಳಲ್ಲಿ ಪ್ರಾಣಿಗಳನ್ನು ಬಲಿಗಾಗಿ ಬಳಸುವ ಪದ್ಧತಿಯಿದ್ದರೆ, ಇಲ್ಲಿ ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲೇ ರಾಜಾತಿಥ್ಯ ಪಡೆಯುತ್ತಿರುವ ಬಲಿಷ್ಠ ಕೋಣವು ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ.
ಜಾತ್ರೆ ಸಂದರ್ಭದಲ್ಲಿ ದೇವಿಯ ವಿವಾಹ ಮಹೋತ್ಸವಕ್ಕೆ ಪೂರಕವಾಗಿ ಕಂಕಣ ಧಾರಣೆಯ ವಿಧಿ ವಿಧಾನಗಳು ಮುಗಿಯುತ್ತಿದ್ದಂತೆಯೇ, ಈ ಪಟ್ಟದ ಕೋಣಕ್ಕೆ ವಿಶೇಷ ಅಲಂಕಾರಗಳನ್ನು ಮಾಡಿ ರಾಜ ಮರ್ಯಾದೆಯೊಂದಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಲು ಕೊಂಡೊಯ್ಯಲಾಗುತ್ತದೆ. ತಮಟೆ, ವಾದ್ಯಗಳ ಮೂಲಕ ಪಟ್ಟದ ಕೋಣದ ಮೆರವಣಿಗೆ ನಡೆಯುತ್ತದೆ. ಈ ವೇಳೆ ಭಕ್ತಾದಿಗಳು ಕೋಣಕ್ಕೆ ಭಕ್ತಿಯಿಂದ ನೀರೆರೆದು, ಹಣೆಗೆ ಕುಂಕುಮ ಹಚ್ಚಿ, ಅಕ್ಕಿ-ಕಾಯಿಗಳನ್ನು ಅರ್ಪಿಸಿ ಪೂಜಿಸುತ್ತಾರೆ.
‘ಈ ಕೋಣವು ಮಾತೆ ಮಾರಿಕಾಂಬೆಯ ಗಂಡನಾಗಿದ್ದು, ಇದು ವರನ ಮೆರವಣಿಗೆ ಎಂದು ಜಾನಪದ ನಂಬಿಕೆ. ತಾಯಿಯು ತನಗೆ ಮೋಸ ಮಾಡಿದ ಹಾಗೂ ಧರ್ಮದ ವಿರುದ್ಧ ನಡೆದುಕೊಂಡ ಗಂಡನನ್ನು ಕೊಂದಳು ಎಂಬುದು ಒಂದು ಕಥೆ. ಹಾಗೆ ಅವಳು ಕೊಲ್ಲುವ ಮೊದಲು ಭಯಭೀತನಾದ ಗಂಡ ತಂತ್ರವಿದ್ಯೆಯಿಂದ ತನ್ನ ರೂಪವನ್ನು ಕೋಣವಾಗಿ ಬದಲಾಯಿಸಿಕೊಂಡ ಎನ್ನುತ್ತದೆ ಜಾನಪದ ಕಥೆ’ ಎನ್ನುತ್ತಾರೆ ಕೋಣನನ್ನು ಮೆರವಣಿಗೆ ಕೊಂಡೊಯ್ಯುವ ಮೇತ್ರಿ ಜನರು.
‘ಮೇತ್ರಿ ಕುಟುಂಬದ ಜನರೇ ಕೋಣವನ್ನು ಊರು ಸುತ್ತಿಸಬೇಕು. ಕೋಣ ನಿಯಂತ್ರಿಸಲು 8–10 ಜನ ಬೇಕು. ಊರೂರು ಸುತ್ತಿ ಬಾಳೆಹಣ್ಣು, ಅಕ್ಕಿ, ಎಣ್ಣೆ, ತರಕಾರಿಯನ್ನು ನೈವೇದ್ಯವಾಗಿ ಪಡೆಯುತ್ತದೆ ಈ ಕೋಣ. ನಂತರ ಜನರು ಮನೆಯ ಮುಂದೆ ಬಂದ ಕೋಣದ ಮೈಗೆ ಎಣ್ಣೆ ಹಾಗೂ ತಂಪು ನೀರನ್ನು ಸವರಿ ನೇವರಿಸುತ್ತಾರೆ. 5 ದಿನ ಕಾಲ ಮೆರಣವಿಗೆ ನಡೆಯುತ್ತದೆ. ಎರಡು ವರ್ಷ ಗುಡಿಯಲ್ಲಿದ್ದ ಕೋಣ ಹೊರಗಡೆ ಬಂದಿದ್ದು, ನೋಡುಗರಿಗೆ ಸಂಭ್ರಮದ ವಿಷಯವಾಗಿದೆ’ ಎನ್ನುತ್ತಾರೆ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ.
ಜಾತ್ರೆ ಮುಗಿಯುತ್ತಿದ್ದಂತೆಯೇ ಪಟ್ಟದ ಕೋಣವು ಮತ್ತೆ ಮರ್ಯಾದೆಯೊಂದಿಗೆ ದೇವಾಲಯದ ಆಶ್ರಯಕ್ಕೆ ಮರಳುತ್ತದೆ. ಕ್ರೌರ್ಯರಹಿತವಾಗಿ ಧಾರ್ಮಿಕ ವಿಧಿಗಳನ್ನು ನಡೆಸುವ ಮೂಲಕ ಮಾರಿಕಾಂಬಾ ಜಾತ್ರೆ ಅಹಿಂಸೆಯ ಮಹಾ ಸಂಭ್ರಮಕ್ಕೆ ಸಾಕ್ಷಿಆರ್.ಜಿ.ನಾಯ್ಕ ಮಾರಿಕಾಂಬಾ ದೇವಾಲಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.